ಮಠದಲ್ಲಿ ಮುರುಘಾ ಶ್ರೀ ಪ್ರತ್ಯಕ್ಷ

ಬೆಂಗಳೂರು,ಆ.೨೯-ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನುವ ವದಂತಿಗಳ ನಡುವೆ ಮಠದಲ್ಲಿ ಪ್ರತ್ಯಕ್ಷರಾದರು.
ಮಠದಲ್ಲಿ ಸೇರಿದ ಅಸಂಖ್ಯಾತ ಭಕ್ತರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಮೇಲೆ ಬಂದಿರುವ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪವನ್ನು ನಿರಾಕರಿಸಿದರು.
ನೆಲದ ಕಾನೂನು ಗೌರವಿಸಬೇಕಾಗಿದೆ ನಾವು ಕಾನೂನು ಗೌರವಿಸುವ ಮಠಾಧೀಶನಾಗಿದ್ದೇನೆ ಪಲಾಯನವಾದ ಇಲ್ಲ ಊಹಾಪೋಹಗಳಿಗೆ ಅವಕಾಶ ಇಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಕಾನೂನಿನ ಚೌಕಟ್ಟುವಿನಲ್ಲಿ ಎಲ್ಲವೂ ನಡೆಯಬೇಕು ನಾವು ಎಲ್ಲಾದಕ್ಕೂ ಸಹಕಾರ ನೀಡುತ್ತೇವೆ ಮುರಾಘ ಮಠದ ಭಕ್ತರ ನೋವು ನಮ್ಮೆಲ್ಲರ ನೋವಾಗಿದೆ ಎಂದರು.
ಮಠದ ಅಸಂಖ್ಯಾತ ಭಕ್ತರು ಊಹಾಪೋಹಗಳು ಗಾಳಿ ಸುದ್ದಿ ನಂಬಬಾರದು ಮುರುಘಾ ಮಠವು ನ್ಯಾಯಸ್ಥಾನದಲ್ಲಿದೆ ಎಲ್ಲಾ ಆರೋಪಗಳಿಂದ ಕಾನೂನಿನ ಚೌಕಟ್ಟಿನಿಂದ ನಾವು ಹೊರಗಡೆ ಬರಲಿದ್ದೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮಠದ ಮೇಲೆ ಹಿಂದಿನಿಂದಲೂ ಷಡ್ಯಂತ್ರ ನಡೆಯುತ್ತಿದೆ ಮೊದಲು ಒಳಗಿನಿಂದ ಈಗ ಹೊರಗಿನಿಂದ ಪಿತೂರಿ ನಡೆದಿದೆ ಇಂತಹ ಸಂದರ್ಭವನ್ನು ಎದುರಿಸುವ ಶಕ್ತಿ ನಮಗಿದೆ ಎಂದರು.
ಲೈಂಗಿಕ ಕಿರುಕುಳದ ದೂರು ಸಲ್ಲಿಕೆಯಾಗುತ್ತಿದ್ದಂತೆ ಮಠದಲ್ಲೇ ಬೆಂಬಲಿಗರು, ಭಕ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದ ಶರಣರು ಕಳೆದ ರಾತ್ರಿಯಿಂದ ಕಾಣಿಸಿಕೊಂಡಿರಲಿಲ್ಲ.ಇದರಿಂದ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ ಅನುಮಾನ ವ್ಯಕ್ತವಾಗಿ, ಪೊಲೀಸರು ಮಠಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು
ಸಂತ್ರಸ್ತ ಬಾಲಕಿಯರು ಮಕ್ಕಳ ಕಲ್ಯಾಣ ಸಮಿತಿ ಸಮಾಲೋಚಕರು ಹಾಗೂ ಪೊಲೀಸರ ಎದುರು ನಿನ್ನೆ ಹೇಳಿಕೆ ದಾಖಲು ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಲಾಗಿದ್ದು ಇಂದು ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡುವ ಸಾಧ್ಯತೆ ಇದೆ. ಬಳಿಕ ಮಕ್ಕಳೊಂದಿಗೆ ಪೊಲೀಸರು ಸ್ಥಳ ಮಹಜರ್ ಗೆ ಮಠಕ್ಕೆ ಧಾವಿಸಲಿದ್ದಾರೆ. ಹೀಗಾಗಿ, ಪೀಠಾಧ್ಯಕ್ಷರು ಮಠ ತೊರೆದಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು.
ಇದರ ನಡುವೆ ಮಧ್ಯಾಹ್ನದ ವೇಳೆಗೆ ಶರಣರು ಹಾವೇರಿ ಸಮೀಪದ ಹೆದ್ದಾರಿಯಲ್ಲಿ ಕಾಣಿಸಿಕೊಂಡರು. ಇದನ್ನು ಚಿತ್ರದುರ್ಗ ಪೊಲೀಸರ ಗಮನಕ್ಕೆ ತಂದ ಹಾವೇರಿ ಪೊಲೀಸರು ಅವರನ್ನು ಹಿಂಬಾಲಿಸಿದರು.
ಬಂಕಾಪುರ ಸಮೀಪದಲ್ಲಿ ಚಿತ್ರದುರ್ಗ ಪೊಲೀಸರು ಕೂಡಾ ಶರಣರು ಬರುತ್ತಿದ್ದ ಕಾರಿನ ಸಮೀಪ ಬಂದರು. ಇದರಿಂದ ಅವರನ್ನು ವಶಕ್ಕೆ ಪಡೆಯಲಾಯಿತು ಎಂಬ ಸುದ್ದಿಗಳು ಹರಡಿದವು.
ಇದನ್ನು ನಿರಾಕರಿಸಿದ ಶರಣರು ತಮ್ಮನ್ನು ಯಾರೂ ಬಂಧಿಸಿಲ್ಲ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ತೆರಳಿದ್ದೆ.ಇದರಿಂದ ತಾವು ನಾಪತ್ತೆಯಾಗಿದ್ದೇನೆಂಬ ವದಂತಿಗಳು ಹರಡಿದವು. ತಾವು ಈಗ ಮಠಕ್ಕೆ ತೆರಳುತ್ತಿದ್ದು ಪೊಲೀಸರು ತಮಗೆ ಬೆಂಗಾವಲಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಪ್ರಕರಣದಲ್ಲಿ ೨೪ ಗಂಟೆಯಲ್ಲಿ ಸಂತ್ರಸ್ತರ ಹೇಳಿಕೆಯನ್ನು ಸಿಆರ್?ಪಿಸಿ ಸೆಕ್ಷನ್ ೧೬೪ರ ಅಡಿ ದಾಖಲಿಸಬೇಕಿತ್ತು. ಆದರೆ ೫೨ ಗಂಟೆ ಕಳೆದರೂ ಇದುವರೆಗೂ ಹೇಳಿಕೆ ದಾಖಲಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು ಎಂಬುವುದು ನಮ್ಮ ಉದ್ದೇಶ. ನಾನು ನಂಬಿದ್ದ ಸ್ವಾಮೀಜಿ ವಿಕೃತಕಾಮಿ ಆಗಿದ್ದು ಹೇಗೆ ಎಂಬುದರ ಬಗ್ಗೆ ನನಗೆ ಆತಂಕವಾಗಿದೆ ಎಂದು ಒಡನಾಡಿ ಸಂಸ್ಥೆಯ ಪರಶು ಆಕ್ರೋಶ ಹೊರಹಾಕಿದರು.
೩೦ ವಿದ್ಯಾರ್ಥಿಗಳು ಸಂಪರ್ಕ:
ಬಂಧನ ಆಗಿದೆಯೋ ಇಲ್ಲವೋ ಎಂಬುವುದು ನನಗೆ ಗೊತ್ತಿಲ್ಲ. ಮಕ್ಕಳಿಗೆ ಅದೆಷ್ಟು ಬಾರಿ ಕೌನ್ಸಿಲಿಂಗ್ ಮಾಡುತ್ತಾರೆ. ಈ ಪ್ರಕರಣದ ಬೆನ್ನಲ್ಲೇ ಸುಮಾರು ೩೦ ವಿದ್ಯಾರ್ಥಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ ಅಂದ್ರೆ ಅಲ್ಲಿಯ ಜನರಿಗೆ ತನಿಖಾಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಎಂದರ್ಥ ಅಲ್ಲವಾ ಎಂದು ಸ್ಪೋಟಕ ಹೇಳಿಕೆ ನೀಡಿದರು.
ರಾಜಿ ಇಲ್ಲ:
ನನ್ನ ಹೆಗಲ ಮೇಲೆ ಯಾರೂ ಬಂದೂಕು ಇರಿಸಲು ಸಾಧ್ಯವಿಲ್ಲ. ಮಕ್ಕಳು ನನ್ನ ಬಳಿ ಬಂದಾಗ ಅವರ ಧ್ವನಿಯನ್ನು ಕೇಳಿದ್ದೇವೆ. ತಂದೆಯಾದವನು ವಿಕೃತಿ ಆಗಿರೋದು ಕೇಳಿ ಶಾಕ್ ಆಗಿತ್ತು. ನಾನು ಯಾರ ಜೊತೆಯೂ ರಾಜಿ ಆಗಲ್ಲ. ಬೇಕಾದ್ರೆ ನನ್ನ ಸಂಸ್ಥೆ ಇಂದೇ ಮುಚ್ಚಿ ಹೋದರೂ ನನಗೆ ಚಿಂತೆ ಇಲ್ಲ ಎಂದು ಹೇಳಿದರು.
ಶ್ರೀಗಳ ಆಡಿಯೋ ಹೇಳಿಕೆ:
ಮುರುಘಾ ಮಠದಲ್ಲಿಯೇ ಶ್ರೀಗಳು ವಾಸವಾಗಿದ್ದರು. ನಿನ್ನೆ ಈ ಪ್ರಕರಣ ಸಂಬಂಧ ಆಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದ ಶ್ರೀಗಳು, ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಒಂದು ವೇಳೆ ಸಂಧಾನ ವಿಫಲವಾದ್ರೆ ಕಾನೂನು ಹೋರಾಟಕ್ಕೆ ಶ್ರೀಗಳು ಸಿದ್ಧ ಎಂದು ಹೇಳಿದ್ದಾರೆ.

ಮುರುಘಾ ಮಠದ ಶ್ರೀಗಳನ್ನು ಪೊಲೀಸರು ವಶಕ್ಕೆ ಪಡೆದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರದುರ್ಗದಲ್ಲಿರುವ ಬೃಹನ್ಮಠದ ಬಳಿ ಜಮಾಯಿಸಿರುವ ಭಕ್ತರು.


ಶರಣರಿಗೆ ಬೆಂಬಲ:
ಮುರುಘಾ ಶರಣರ ಮೇಲೆ ಬಂದಿರುವ ಆರೋಪ ಆಧಾರರಹಿತ, ಅಲ್ಲದೇ ಮಠ ಹಾಗೂ ಮುರುಘಾ ಶರಣರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗವಾಗಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿದೆ. ಇದೀಗ ಸ್ವಾಮೀಜಿಗಳ ಬೆಂಬಲಕ್ಕೆ ಭಕ್ತರು ಹಾಗೂ ದಲಿತ ಸಂಘಟನೆಗಳು ನಿಂತಿವೆ
ಬಾಲಕಿಯರ ಹೇಳಿಕೆ:
ಬಾಲಕಿಯರು ಹೇಳಿಕೆ ನೀಡಿದ ಬಳಿಕ ನ್ಯಾಯಾಲಯ ಆರೋಪಿಯ ಬಗ್ಗೆ ಕೇಳಬಹುದು. ಆರೋಪಿ ಬಂಧನ ಆಗಿದ್ದಾರಾ ಅಂತ ತನಿಖಾಧಿಕಾರಿಗೆ ಕೇಳಬಹುದು. ಬಂಧನ ಆಗಿಲ್ಲ ಅಂತ ಹೇಳಿದರೆ. ಯಾಕೆ ಬಂಧಿಸಿಲ್ಲ ಅಂತಾನೂ ಕೋರ್ಟ್ ತನಿಖಾಧಿಕಾರಿಗೆ ಕೇಳಬಹುದು. ಜೊತೆಗೆ ಆರೋಪಿಯ ಬಂಧನ ಮಾಡುವಂತೆ ಕೋರ್ಟ್ ಸೂಚನೆಯೂ ನೀಡಬಹುದು. ಪೋಕ್ಸೋ ಪ್ರಕರಣದಲ್ಲಿ ಕೇಸ್ ದಾಖಲಾದರೆ ಆರೋಪಿಯ ಬಂಧನ ಆಗುತ್ತದೆ. ಆದರೂ ಈ ಪ್ರಕರಣದಲ್ಲಿ ಎರಡೂ ದಿನಗಳಾದರೂ ಆರೋಪಿಯ ಬಂಧನ ಆಗಿಲ್ಲ.
ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹಿನ್ನಲೆ ಮುರಾಘಾ ಮಠದಲ್ಲಿ ಸಭೆ ನಡೆಯಿತು. ಮುರುಘಾ ಶರಣರ ನೇತೃತ್ವದಲ್ಲಿ ಭಕ್ತರು ಮತ್ತು ಮಠಾಧೀಶರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಶ್ರೀಗಳು, ಸುಳ್ಳು ಕೇಸ್ ವಿರುದ್ಧ ಧೈರ್ಯದಿಂದ ಒಗ್ಗಟ್ಟಾಗಿ ಹೋರಾಡುವುದಾಗಿ ಹೇಳಿದರು.