ಮಠಗಳು ಸಮಾಜ ಮುಖಿ ಕಾರ್ಯ ಮಾಡಲಿ

ಶಹಾಬಾದ್:ಮೇ.8:ಸಮಾಜೋದ್ಧಾರಕ್ಕಾಗಿ ಮಠಗಳನ್ನು ಸ್ಥಾಪಿಸಲಾಗಿದೆ ಮಠಗಳು ಸಮಾಜ ಮುಖಿ ಕಾರ್ಯಗಳನ್ನು ಮಾಡಿದರೆ ಸಮಾಜದಲ್ಲಿ ಶಾಂತಿ ಏರ್ಪಡುತ್ತದೆ ಎಂದು ಕಟ್ಟಿಮನಿ ಸಂಸ್ಥಾನ ಹಿರೇಮಠದ ಪೂಜ್ಯರಾದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ತಾಲೂಕಿನ ಪುರಾತನ ಪ್ರಸಿದ್ಧಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀಗುರು ನಿಜಲಿಂಗೈಕ್ಯ ಸಿದ್ಧಲಿಂಗ ಶಿವಯೋಗಿಗಳವರ 74 ನೇ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಠಗಳ ಪರಿಕಲ್ಪನೆಯೇ ಭಕ್ತ ಉದ್ಧಾರದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಸಾಧನೆ ಮಠಗಳ ಆಶಯವಾಗಿದೆ. ಇಂದಿನ ಕಲುಷಿತ ವಾತಾವರಣದಲ್ಲಿ ತಮ್ಮ ಕಾಯಕದೊಂದಿಗೆ ಸಮಾಜದಲ್ಲಿ ಧೈರ್ಯದೊಂದಿಗೆ ಹೆಣ್ಣು ಮಕ್ಕಳು ಮುಂದೆ ಬಂದು ಸಾಧನೆ ಮಾಡುತ್ತಿದ್ದಾರೆ ಅವರಿಗೆ ನಾವೆಲ್ಲರೂ ಪ್ರೋತ್ಸಾಹಿಸಿ ಪ್ರೀತಿ, ವಿಶ್ವಾಸದಿಂದ ಗೌರವಿಸಿ ಪೂಜ್ಯತೆ ಸ್ಥಾನ ಕೊಡಬೇಕು. ದಿನ ನಿತ್ಯ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ ಮನಸ್ಸಿಗೆ ಬೇಸರ ತಂದಿದೆ. ವಿಧವೆ ತಾಯಂದಿರ ಕಷ್ಟ ನಷ್ಟ ತಿಳಿದು ಅವರ ಕಣ್ಣಿರು ಒರೆಸು ಮನಸ್ಸು ನಮ್ಮದಾಗಬೇಕು.

ದೇಶದಲ್ಲಿ ಸ್ವಾರ್ಥ ಮತ್ತು ಲಂಚದ ವಾತಾವರಣವಿದ್ದು ಬಡವರು ಮತ್ತು ದುರ್ಬಲರ ಜೀವನ ಕಷ್ಟಕರವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇಂತಹ ಜನರ ನೆರವಿಗೆ ಮತ್ತು ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲರೂ ಮುಂದಾಗೋಣ. ಹಿಂದು ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಪಾತ್ರಿನಿಧ್ಯ ಇದೆ. ಹೆಣ್ಣಿಗೆ ಸಮಾಜದಲ್ಲಿ ಸಮಾನತೆ ಹಾಗೂ ಪೂಜನೀಯ ಸ್ಥಾನ ನೀಡಬೇಕು ಎಂದು ಹೇಳಿದರು.

ಜ್ಞಾನ ಯೋಗಿನಿ ಮಾತೋಶ್ರೀ ಶ್ರೀದೇವಿ ತಾಯಿ ಓಂಕಾರ ಅವರು ಮಾತನಾಡುತ್ತ, ಮನುಷ್ಯ ತನ್ನ ಎಲ್ಲ ಅಗತ್ಯಗಳಲ್ಲಿ ಅಂತರ್ಜಾಲದ ಮೂಲಕ ಅಂಗೈಯಲ್ಲಿ ಪೂರೈಸಿಕೊಳ್ಳುತ್ತಿದ್ದಾರೆ. ಆದರೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ನೆಮ್ಮದಿಗಾಗಿ ಪುರಾಣ, ಪುಣ್ಯಕಥಗಳ ಶ್ರವಣ ಅಗತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಲಬುರಗಿಯ ಮಹಾದೇವಿ ನಂದಿಕೋಲ, ಹಾಗೂ ಜಗದೇವಿ ಕೆ ಅವರಿಗೆ ಆದರ್ಶ ಮಾದರಿ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾದಾಸೋಹಿ ಶ್ರೀಶರಣಬಸವೇಶ್ವರ ಮಹಾರಾಜರ ಜೀವನ ದರ್ಶನ ಪ್ರವಚನ ಪ್ರವಚನ ಪ್ರವೀಣೆ ಶರಣ ಸಾಹಿತಿ ಜ್ಞಾನ ಯೋಗಿನಿ ಮಾತೋಶ್ರೀ ಶ್ರೀದೇವಿ ತಾಯಿ ಓಂಕಾರ ಅವರಿಂದ ನಡೆಯುತ್ತಿದ್ದು.ಮಠದ ಭಕ್ತರು, ಮುಖಂಡರು ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡಿದರು.


ಶರಣಬಸವೇಶ್ವರರು ಸಕಲ ಜೀವರಾಶಿಗಳಲ್ಲಿ ದೇವರಾಗಿ ಕಂಡು, ಕಾಯಕ, ದಾಸೋಹ, ಧರ್ಮ ಪ್ರೀತಿ, ದಯೆ, ಇನ್ನೊಬ್ಬರ ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ಧರ್ಮದ ಕಾರ್ಯ ಮಾಡಿದ್ದಾರೆ. ಸಮಾಜದಲ್ಲಿ ಹಿಂಸೆ ಪ್ರವೃತ್ತಿ ಮನುಷ್ಯನಲ್ಲಿ ಬೆಳೆಯುತ್ತಿದೆ. ಒಬ್ಬರ ಮನಸ್ಸು ನೋಯಿಸಿ ಹತ್ತು ಪೂಜೆ ಮಾಡಿದರೇ ಪ್ರಯೋಜನ ಇಲ್ಲ, ಇನ್ನೋಬ್ಬರಿಗೆ ಒಳ್ಳೆಯದನ್ನು ಮಾಡಿ ಸಮಾಜದಲ್ಲಿ ಉತ್ತಮ ವಿಚಾರ ಪಸರಿಸಿ. – ಅಭಿನವ ಸಿದ್ಧಲಿಂಗ ಶಿವಾಚಾರ್ಯರು.