ಮಠಗಳಲ್ಲಿ ಜಾನಪದ ಕಾರ್ಯಕ್ರಮ

ರಾಯಚೂರು.ಏ.೦೪-ಜಿಲ್ಲಾ ಹಾಗೂ ತಾಲೂಕ ಕನ್ನಡ ಜಾನಪದ ಪರಿಷತ್ತು ಮತ್ತು ಜಿಲ್ಲಾ ಹಾಗೂ ಮಹಿಳಾ ಘಟಕ ತಾಲೂಕ ಕನ್ನಡ ಜಾನಪದ ಪರಿಷತ್ತು ರಾಯಚೂರು ವತಿಯಿಂದ ನಿನ್ನೆ ನಗರದ ಸೋಮವಾರಪೇಟೆ ಮಠದಲ್ಲಿ ಮಠಗಳಲ್ಲಿ ಜಾನಪದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನಗರದ ಸೋಮವಾರಪೇಟೆ ಮಠದ ಸ್ವಾಮಿಗಳಾದ ಶ್ರೀ ಅಭಿನವ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ “ಕನ್ನಡ ಜಾನಪದ ಪರಿಷತ್ತು ಜಾನಪದ ಕಲೆಗಳನ್ನು ಬಿತ್ತುವಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ, ಬರುವ ದಿ.೧೬ ರಂದು ಸೋಮವಾರಪೇಟೆಯ ಸಂಸ್ಥಾನ ಮಠವಾದ ಅತ್ತನೂರಿನಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮಗಳನ್ನು ಜಿಲ್ಲಾ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕದ ಸಂಚಾಲಕ ಡಾ|| ಶರಣಪ್ಪ ಗೋನಾಳರವರ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ ಜಾನಪದ ಸಾಹಿತ್ಯ ಬೆಳೆದಿರುವುದೇ ಮಹಿಳೆಯರಿಂದ. ಇಂದಿನ ಮೊಬೈಲ್ ಯುಗದಲ್ಲಿ ಜಾನಪದ ಕಲೆಗಳನ್ನು ಬೆಳೆಸುವ ಕಾರ್ಯವನ್ನು ಮಹಿಳೆಯರು ಮಾಡಬೇಕು. ಜಾನಪದ ಕಲೆ, ಸಂಸ್ಕೃತಿಯನ್ನು ತಮ್ಮ ಮಕ್ಕಳಿಗೆ ಹೇಳುವುದರ ಮೂಲಕ ಜಾನಪದ ಕಲೆಯನ್ನು ಉಳಿಸಬೇಕೆಂದು ಹೇಳಿದರು.
ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷಣಿ ದಾನಮ್ಮ ಮಾತನಾಡಿ ನಗರದ ಸೋಮವಾರಪೇಟೆ ಮಠ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಪರಿಷತ್ತಿಗೆ ತುಂಬಾ ಸಹಕಾರ ನೀಡುತ್ತಿದೆ. ಈ ಮಠವು ಮಹಿಳೆಯರಿಗೆ ತವರುಮನೆಯಂತಿದೆ. ಎಲ್ಲಾ ಆಸಕ್ತ ಮಹಿಳೆಯರು ಕನ್ನಡ ಜಾನಪದ ಪರಿಷತ್ತಿನ ಮೂಲಕ ಜಾನಪದ ಕಲೆಯನ್ನು ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ದಂಡಪ್ಪ ಬಿರಾದರ ಮಾತನಾಡಿ ಜಾನಪದ ಸಾಹಿತ್ಯವನ್ನು ಮನೆಮನೆಗೆ, ಮಠಗಳಿಗೆ, ಕಾಲೇಜುಗಳಿಗೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಕನ್ನಡ ಜಾನಪದ ಪರಿಷತ್ ರಾಯಚೂರು ಮತ್ತು ಮಹಿಳಾ ಘಟಕ ಆಯೋಜನೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಸೋಮವಾರ ಪೇಟೆ ಮಠದಲ್ಲಿ ಮಹಾ ಸ್ವಾಮಿಗಳ ಸಾನಿಧ್ಯದಲ್ಲಿ ಮಠಕ್ಕೆ ಜಾನಪದ ಸಾಹಿತ್ಯ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಜಂಟಿ ಕಾರ್ಯದರ್ಶಿ ಮುರಳೀಧರ ಕುಲಕರ್ಣಿ ಮಾತನಾಡಿ ಜಾನಪದ ಸಾಹಿತ್ಯವು ಎಲ್ಲಾ ಸಾಹಿತ್ಯದ ಮೂಲ ಸಾಹಿತ್ಯವಾಗಿದೆ. ಇದು ಮಹಿಳೆಯರ ಭಾವನೆಗಳನ್ನು ಅವರ ಜೀವನ ಶೈಲಿಗಳನ್ನು ಹಾಗೂ ಬದುಕಿನ ರೀತಿ ನೀತಿಗಳನ್ನು ಅನಾವರಣಗೊಳಿಸುವ ಶುದ್ಧ ಸಾಹಿತ್ಯವಾಗಿದೆ. ಈ ಸಾಹಿತ್ಯವನ್ನು ಮಹಿಳೆಯರೇ ಬೆಳೆಸಬೇಕು. ಅವರೇ ಜಾನಪದ ಸಾಹಿತ್ಯದ ರೂವಾರಿಗಳು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಇವರ ೬೯ನೇ ಹುಟ್ಟುಹಬ್ಬವನ್ನು ಆಚರಿಸಿ ಅಭಿನಂದಿಸಲಾಯಿತು. ಸೋಮವಾರಪೇಟೆ ಮಠದ ಮಹಾಸ್ವಾಮಿಗಳು ಶಾಲು ಹೊದಿಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಗೌರವ ಅಧ್ಯಕ್ಷರಾದ ಜಿ.ವಿಜಯರಾಜೇಶ್ವರಿ ಗೋಪಿಶೆಟ್ಟಿ, ರಾಯಚೂರು ತಾಲೂಕ ಅಧ್ಯಕ್ಷ ಸಿದ್ಧಯ್ಯಸ್ವಾಮಿ ಚೇಗುಂಟಾ, ಮಹಿಳಾ ಘಟಕದ ಕಾರ್ಯದರ್ಶಿ ಸುಮಂಗಲಾ ಸಕ್ರಿ, ರಾಯಚೂರು ತಾಲೂಕ ಅಧ್ಯಕ್ಷೆ ವೈ.ಕೆ. ಯಶೋಧ ಪದಾಧಿಕಾರಿಗಳಾದ ಜಯಶ್ರಿ ವಾಲಿ, ಗೌರಿಪಲ್ಲಕ್ಕಿ, ಡಾ|| ಶಿವಲೀಲಾ, ಶಿಲ್ಪಾ ಮಲ್ಲಿಕಾರ್ಜುನ, ಮಂಜುಳಾ ಹಿರೇಮಠ, ಡಾ|| ರಾಜೇಶ್ವರಿ, ನಾಗರತ್ನ, ಸುಲೋಚನಾ.ಬಿ ಮತ್ತು ಮಠದ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.