ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.30: ತಾಲೂಕಿನ ಹೊಳಲು ಗ್ರಾಮದಲ್ಲಿ ಈಚೆಗೆ ಜೀರ್ಣೋದ್ದಾರಗೊಂಡಿರುವ ಮಲ್ಲಿಕಾರ್ಜುನ ವಿರಕ್ತ ಮಠಕ್ಕೆ ಮುಸ್ಲಿಂಬಾಂದವರು 25ಸಾವಿರ ರೂ. ದೇಣಿಗೆ ನೀಡಿ ಸೌಹಾರ್ದ ಮೆರೆದಿದ್ದಾರೆ.
ಮಠದ ಲೋಕಾರ್ಪಣೆ ಅಂಗವಾಗಿ ಕಳೆದ 15 ದಿನಗಳಿಂದ ನಿರಂತರ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳವಾರ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಂಜುಮನ್ ಅಧ್ಯಕ್ಷ ಕೆ.ಅಬ್ದುಲ್ ಅಜೀಜ್, ಕಾರ್ಯದರ್ಶಿ ಎನ್.ಸುಭಾನ್ ಸಾಬ್, ಖಜಾಂಜಿ ಇಸೂಫ್, ಮದರಸ ಅಧ್ಯಕ್ಷ ಎಂ.ರಾಜಾಸಾಬ್, ಪಿ.ಮೌಲಾಸಾಬ್, ಹಿರಿಯರಾದ ಮುಜಾವರ್ ಇಮಾಮ್ ಸಾಬ್ ಅವರು ಮಠಕ್ಕೆ ದೇಣಿಗೆ ಹಣ ನೀಡಿದರು. ಇದೇ ವೇಳೆ ರಂಜಾನ್ ಅಂಗವಾಗಿ ಉಪವಾಸ ವ್ರತದಲ್ಲಿದ್ದ ಮುಸ್ಲಿಂ ಬಾಂಧವರಿಗೆ ಹಣ್ಣು, ಫಲಾಹಾರ ನೀಡಿ ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. 550ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿತುಂಬಲಾಯಿತು. ಪ್ರಸಾದಕ್ಕಾಗಿ ಮಹಿಳೆಯರು ವಿಶೇಷವಾಗಿ 2ಸಾವಿರ ಹೋಳಿಗೆ ಹಾಗೂ ಸಾವಿರಾರು ಕರಿಗಡಬು ತಯಾರಿಸಿಕೊಂಡು ಬಂದಿದ್ದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಲಿಂಗನಾಯಕನಹಳ್ಳಿ ಚನ್ನವೀರ ಶ್ರೀಗಳು ಮಾತನಾಡಿ, ಹೊಳಲು ಗ್ರಾಮ ದೈವಿಕ ಕಾರ್ಯಕ್ರಮಗಳಿಗೆ ಮಾದರಿಯಾಗಿದೆ. ಇಲ್ಲಿನ ಮುಸ್ಲಿಂ ಬಾಂಧವರು ಮಠದ ಧಾರ್ಮಿಕ ಕಾರ್ಯಕ್ಕೆ ದೇಣಿಗೆ ನೀಡಿ ಭಾವೈಕ್ಯತೆ ಮೆರೆದಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಅತ್ತಿಮತ್ತೂರಿನ ವಿರಕ್ತ ಮಠದ ನಿಜಗುಣ ಶ್ರೀಗಳು ಹಾಗೂ ಹಿರೇಸಿಂದೋಗಿ ಕಪ್ಪತ್ತ ಮಠದ ಚಿದಾನಂದ ಶ್ರೀಗಳು ಆಶೀರ್ವಚನ ನೀಡಿದರು. ಮಠದ ಉತ್ತರಾಧಿಕಾರಿ ಚನ್ನಬಸವ ಶ್ರೀಗಳು ಇದ್ದರು.
ಇದೇವೇಳೆ ಶ್ರೀಮಠದ ಕಟ್ಟಡಕ್ಕೆ ಹಾಗೂ ನಿತ್ಯ ಪ್ರಸಾದ ಸೇವೆಗೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈಸಂದರ್ಭದಲ್ಲಿ ಹೊಳಲು ಹಾಗೂ ಸುತ್ತಮತ್ತ ಗ್ರಾಮಗಳ ಭಕ್ತರು ಸೇರಿದಂತೆ ಶ್ರೀಮಠದ ಪುರಾಣ ಸಮಿತಿಯ ಸರ್ವರು ಪಾಲ್ಗೊಂಡಿದ್ದರು.