ಮಟ್ಕಾ ದಂಧೆಗೆ ಕಡಿವಾಣ ಐಜಿಪಿ ಎಚ್ಚರಿಕೆ

ತುಮಕೂರು, ಏ. ೧೭- ಕೇಂದ್ರ ವಲಯ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ಮುಂದುವರೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಮಟ್ಕಾ ದಂಧೆಯನ್ನು ವೃತ್ತಿಯಾಗಿಸಿಕೊಂಡಿರುವವರು ಸೈಲೆಂಟ್ ಆಗಿ ಸೈಡ್‌ನಲ್ಲಿದ್ದರೆ ಸರಿ, ಇಲ್ಲವಾದರೆ ಕಠಿಣ ಕಾನೂನು ಕ್ರಮ ತಪ್ಪಿದ್ದಲ್ಲ ಎಂದು ಕೇಂದ್ರ ವಲಯದ ಐಜಿಪಿ ಎಂ. ಚಂದ್ರಶೇಖರ್ ಖಡಕ್ ಎಚ್ಚರಿಕೆ ನೀಡಿದರು.
ಕೇಂದ್ರ ವಲಯ ವ್ಯಾಪ್ತಿಯಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಮಟ್ಕಾ ಕಿಂಗ್‌ಪಿನ್ ಅಶ್ವತ್ಥನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಮಟ್ಕಾ ದಂಧೆಕೋರರಿಗೆ ಹೆಡೆಮುರಿ ಕಟ್ಟಲು ಕ್ರಮ ವಹಿಸಲಾಗಿದ್ದು, ಮಟ್ಕಾ ದಂಧೆಯಲ್ಲಿರುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಟ್ಕಾ ದಂಧೆಗೆ ಬೆಂಬಲ ನೀಡುವ ಪೊಲೀಸರ ಮೇಲೂ ಶಿಸ್ತು ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮಟ್ಕಾ ದಂಧೆಯನ್ನು ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.
ಸಿರಾ ಮತ್ತು ಕುಣಿಗಲ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಅಪಘಾತ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ವೀಸ್ ರಸ್ತೆಗಳಲ್ಲಿ ಆಗುತ್ತಿರುವ ಅಪಘಾತದಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ಮಾಡಿದರು.
ಮೈಸೂರು ಘಟನೆ ನಂತರ ವಾಹನ ಸವಾರರೊಂದಿಗೆ ಸೌಜನ್ಯದಿಂದ ವರ್ತಿಸಲು ಸಂಚಾರಿ ಪೊಲೀಸರಿಗೆ ಸೂಚನೆ ನೀಡಲಾಗಿದೆ. ವಾಹನ ಸವಾರರೊಂದಿಗೆ ಅನುಚಿತವಾಗಿ ವರ್ತಿಸಿದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಸಿಸಿ ಟಿವಿ ಮೂಲಕ ವಾಹನ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಕ್ರಮೇಣ ಪೊಲೀಸ್ ರಹಿತ ವ್ಯವಸ್ಥೆ ಜಾರಿಯಾಗಲಿದೆ ಎಂದರು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಸ್ವಯಂಪ್ರೇರಿತರಾಗಿ ರಾತ್ರಿ ಕರ್ಫ್ಯೂಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಕೋವಿಡ್ ೨ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಪೊಲೀಸರ ಸುರಕ್ಷತೆ ಅವಶ್ಯಕವಾಗಿದೆ. ಪೊಲೀಸ್ ಸಿಬ್ಬಂದಿಗೂ ಈ ಬಗ್ಗೆ ಮಾರ್ಗದರ್ಶನ ನೀಡಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಇದುವರೆಗೆ ೯ ಮಂದಿ ಕೋವಿಡ್ ೨ನೇ ಅಲೆಗೆ ತುತ್ತಾಗಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ಪೊಲೀಸರು ಹೇಗೆ ಸಾರ್ವಜನಿಕರೊಂದಿಗೆ ವರ್ತಿಸಬೇಕು ಎನ್ನುವುದರ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ, ಸೂಚನೆ ನೀಡಲಾಗಿದೆ. ಕೊರೊನಾ ೨ನೇ ಅಲೆಗೆ ಒಳಗಾಗದಂತೆ ಪೊಲೀಸ್ ಸಿಬ್ಬಂದಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಲಹೆ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಅಡಿಷನಲ್ ಎಸ್ಪಿ ಟಿ.ಜೆ. ಉದೇಶ್ ಮತ್ತಿತರರು ಉಪಸ್ಥಿತರಿದ್ದರು.