ಮಟನ್ ಕೈಮಾ ಬಾಲ್

ಬೇಕಾಗುವ ಸಾಮಗ್ರಿಗಳು

*ಮಟನ್ ಕೈಮಾ – ೧/೪ ಕೆ.ಜಿ
*ಮೊಟ್ಟೆ – ೧
*ಧನಿಯಾ ಪುಡಿ – ೩ ಚಮಚ
*ತೆಂಗಿನಕಾಯಿ ತುರಿ – ಸ್ವಲ್ಪ
*ಅಕ್ಕಿ ಹಿಟ್ಟು- ೨ ಚಮಚ
*ಬೆಳ್ಳುಳ್ಳಿ – ೧
*ಅರಿಶಿಣ – ೨ ಚಮಚ
*ಕಾಳು ಮೆಣಸಿನ ಪುಡಿ – ೨ ಚಮಚ
*ಕರಿಬೇವು – ೨೦ ಎಲೆ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಅಚ್ಚಖಾರದ ಪುಡಿ – ೨ ಚಮಚ
*ಈರುಳ್ಳಿ – ೨
*ಶುಂಠಿ – ಚಿಕ್ಕದು ಅರ್ಧ
*ಚಕ್ಕೆ – ಅರ್ಧ
*ಲವಂಗ – ೪-೫
*ಹಸಿರು ಮೆಣಸಿನ – ೩
*ಹುರಿಗಡಲೆ – ೩ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಉಪ್ಪು – ೩ ಚಮಚ
*ಎಣ್ಣೆ – ೫ ಚಮಚ

ಮಾಡುವ ವಿಧಾನ :

ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ತೆಂಗಿನಕಾಯಿ ತುರಿ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಮಸಾಲೆ ರೆಡಿ ಮಾಡಿಕೊಳ್ಳಿ. ನಂತರ ಹುರಿಗಡಲೆ ಹಾಗೂ ಕೈಮಾವನ್ನು ಹಾಕಿ ರುಬ್ಬಿಕೊಳ್ಳಿ. ಮೊದಲು ಹುರಿಗಡಲೆ ಪುಡಿಗೆ, ಕೋಳಿ ಮೊಟ್ಟೆಯ ಬಿಳಿಭಾಗ ಮಾತ್ರ ಹಾಕಿ ಕಲಸಿ ನಂತರ ಅಕ್ಕಿ ಹಿಟ್ಟು ಸೇರಿಸಿಕೊಂಡು ನುಣುಪಾಗಿ ಕಲಸಿಕೊಂಡು, ಈ ಮಿಶ್ರಣಕ್ಕೆ ಮೊದಲು ಮಾಡಿಟ್ಟುಕೊಂಡ ಮಸಾಲೆ ಸ್ವಲ್ಪ ಭಾಗ ಮತ್ತು ಕೈಮಾ ಮಿಶ್ರಣ ಸೇರಿಸಿ ಇದರಿಂದ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಕಡಾಯಿಗೆ ನೀರು ಹಾಕಿ ಧನಿಯಾ ಪುಡಿ, ಅಚ್ಚಖಾರದ ಪುಡಿ ಸೇರಿಸಿ, ಮಾಡಿಟ್ಟು ಕೊಂಡ ಉಂಡೆಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ. ಕಾದ ಎಣ್ಣೆಗೆ ಕರಿಬೇವು, ಉದ್ದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಈರುಳ್ಳಿ ಹಾಕಿ ಘಮ ಬರುವವರೆಗೆ ಫ್ರೈ ಮಾಡಿ. ಅರಿಶಿಣ, ಧನಿಯಾ ಪುಡಿ, ಕಾಳು ಮೆಣಸಿನ ಪುಡಿ, ರುಬ್ಬಿಕೊಂಡ ಉಳಿದ ಮಸಾಲೆ, ರುಚಿಗೆ ತಕ್ಕಷ್ಟು ಹಾಕಿ ಹುರಿದುಕೊಳ್ಳಿ. ಇದಕ್ಕೆ ಕೈಮಾ ಉಂಡೆ ಹಾಕಿ ಬೇಯಿಸಿದರೆ ಮಟನ್ ಕೈಮಾ ಬಾಲ್ ಸವಿಯಲು ರೆಡಿ.