ಮಟಕಾ, ಜೂಜಾಟ:6 ಜನರ ಬಂಧನ

ಕಲಬುರಗಿ,ಮೇ.23-ನಗರದ ರಾಮಜೀ ನಗರ, ಬಸವೇಶ್ವರ ಕಾಲೋನಿ, ಆಳಂದ ಕಾಲೋನಿ ಮತ್ತು ಕೈಲಾಸ ನಗರದಲ್ಲಿ ಮಟಕಾ, ಜೂಜಾಟವಾಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರಾಮಜೀ ನಗರದ ಮರಗಮ್ಮ ಗುಡಿಯ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಕಲಬುರಗಿ ಉತ್ತರ ಉಪ-ವಿಭಾಗದ ಎಸಿಪಿ ಚಂದ್ರಶೇಖರ ಪಿ., ಪಿಎಸ್‍ಐ ಹಣಮಂತ್ರಾಯ, ಇರ್ಫಾನ್, ನಾಸೀರ್ ಅವರು ದಾಳಿ ನಡೆಸಿ ಮಲ್ಲಿಕಾರ್ಜುನ, ರೋಹಿತ್ ಛಲವಾದಿ, ಸಾವನ್ ಮಗಿ ಎಂಬುವವರನ್ನು ಬಂಧಿಸಿ 2000 ರೂ.ನಗದು ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಪ್ರಶಾಂತ ನೀಲೂರ್, ಬಸವರಾಜ, ಅಜಯ ಕುಂಟೆ, ಮಹಾಂತೇಶ ಸುರಪೂರ, ಗೌತಮ ಮಡಿವಾಳ ಎಂಬುವವರು ಪರಾರಿಯಾಗಿದ್ದು, ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ: ಮೂವರ ಬಂಧನ
ಎಂ.ಬಿ.ನಗರ ಪೊಲೀಸ್ ಠಾಣೆಯ ಪಿಐ ಶಿವಾನಂದ ವಾಲಿಕಾರ, ಎಎಸ್‍ಐ ಮೋದಿನ್, ಸಿಬ್ಬಂದಿಗಳಾದ ಹಣಮಂತ ತೋಟದ, ಬೀರಪ್ಪ, ಮಹೇಶ್ ಅವರು ದಾಳಿ ನಡೆಸಿ ಸಂತ್ರಾಸವಾಡಿಯ ಮಜೀದ್ ಹತ್ತಿರದ ಬಸವೇಶ್ವರ ಕಾಲೋನಿಗೆ ಹೋಗುವ ರಸ್ತೆಯಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಸಂತ್ರಾಸವಾಡಿಯ ಮೋಹ್ಮದ್ ವಾಹೀದ್ ಎಂಬಾತನನ್ನು ಬಂಧಿಸಿ 600 ರೂ.ನಗದು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಆಳಂದ ಕಾಲೋನಿಯಲ್ಲಿರುವ ಸರಕಾರಿ ಶಾಲೆ ಎದರುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆಯ ಎ.ಎಸ್.ಐ ಗಣಪತಿ ಮತ್ತು ಸಿಬ್ಬಂದಿಗಳಾದ ಶಿವಾನಂದ, ಸುರೇಶ ಮತ್ತು ರಾಜಕುಮಾರ ಅವರು ದಾಳಿ ನಡೆಸಿ ಆಳಂದ ಕಾಲೋನಿಯ ಸತೀಷ ಭೀಮರಾವ ವಾಡಿ (41) ಎಂಬಾತನನ್ನು ಬಂಧಿಸಿ 1720 ರೂ.ನಗದು ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಕೈಲಾಸ ನಗರದ ಶಿವಲಿಂಗೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆರ್.ಜಿ.ನಗರ ಪೊಲೀಸ್ ಠಾಣೆಯ ಮುಖ್ಯಪೇದೆ ಮಲ್ಲನಗೌಡ, ಸಿಬ್ಬಂದಿಗಳಾದ ಉಮೇಶ, ಮುಜಾಹೀದ್, ಅರೇಷ ಅವರು ದಾಳಿ ನಡೆಸಿ ಕೈಲಾಸ ನಗರದ ಭೀಮಾಶಂಕರ ಶಕಾಪೂರೆ ಎಂಬಾತನನ್ನು ಬಂಧಿಸಿ 1720 ರೂ.ನಗದು ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಎಂ.ಬಿ.ನಗರ, ಚೌಕ್ ಮತ್ತು ಆರ್.ಜಿ.ನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.