ಮಚ್ಚಿಬಜಾರ್: ಅಗಲೀಕರಣ- ಅಧ್ಯಕ್ಷರು, ಅಧಿಕಾರಿಗಳ ಪರಿಶೀಲನೆ

ರಾಯಚೂರು.ಡಿ.೨೮- ನಗರದ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ತೀನ್‌ಕಂದೀಲ್-ಅಶೋಕಡಿಪೋವರೆಗಿನ ರಸ್ತೆ ಅಗಲೀಕರಣ ಮತ್ತು ನಿರ್ಮಾಣಕ್ಕೆ ಇಂದು ನಗರಸಭೆಯಿಂದ ಅಳತೆ ಮಾಡಿ ತೆರವಿಗೆ ಸೂಚನೆ ನೀಡಲಾಯಿತು.
ಉದ್ದೇಶಿತ ರಸ್ತೆ ೫೦ ಅಡಿಗಳಿಗೆ ಅಗಲೀಕರಣ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆದರೆ, ಕಾರಣಾಂತರಗಳಿಂದ ಈ ಪ್ರಕ್ರಿಯೆ ವಿಳಂಭವಾಗಿತ್ತು. ಕಳೆದ ೨ ದಿನಗಳ ಹಿಂದೆ ಈ ರಸ್ತೆ ವ್ಯಾಪಾರಿಗಳೊಂದಿಗೆ ಚರ್ಚಿಸಿದ ನಂತರ ಈ ರಸ್ತೆ ಅಗಲೀಕರಣ ಮತ್ತು ನಿರ್ಮಾಣಕ್ಕೆ ಸಹಮತ ವ್ಯಕ್ತಗೊಂಡಿತ್ತು. ಈ ಎರಡು ದಿನಗಳಲ್ಲಿ ಈ ಪ್ರಕ್ರಿಯೆ ಆರಂಭಿಸುವ ನಗರಸಭೆ ನಿರ್ಧಾರದಂತೆ ಇಂದು ನಗರಸಭೆ ಅಧ್ಯಕ್ಷ ಈ .ವಿನಯ್ ಕುಮಾರ್ ಮತ್ತು ಪೌರಾಯುಕ್ತರ ತಂಡ ಸ್ಥಳಕ್ಕೆ ತೆರಳಿ ರಸ್ತೆ ಪರಿಶೀಲನಾ ಕಾರ್ಯ ನಡೆಸಿದರು.
೫೦ ಅಡಿಗಳಿಗೆ ರಸ್ತೆ ಅಗಲೀಕರಣದ ಮಾರ್ಕಿಂಗ್ ಈಗಾಗಲೇ ಪೂರ್ಣಗೊಳಿಸಿದ್ದು, ಈಗ ಮತ್ತೊಮ್ಮೆ ಸ್ಪಷ್ಟ ಮಾರ್ಕಿಂಗ್ ಮಾಡಲಾಯಿತು. ಈ ರಸ್ತೆಯನ್ನು ಅಂಕುಡೊಂಕಾಗಿ ನಿರ್ಮಿಸಿದೇ ನೇರವಾಗಿ ಮಾರ್ಕಿಂಗ್ ಮೂಲಕ ರಸ್ತೆಯನ್ನು ವ್ಯವಸ್ಥಿತವಾಗಿ ಅಗಲೀಕರಣಗೊಳಿಸಬೇಕೆಂಬುವುದು ಸ್ಥಳೀಯರ ಬೇಡಿಕೆಯಾಗಿದೆ ನಗರಸಭೆ ಅಧ್ಯಕ್ಷರಾದ ಈ.ವಿನಯ್ ಕುಮಾರ್ ಅವರು ಈಗಾಗಲೇ ೩ ಸಲ ಸ್ಥಳೀಯ ಮಾಲೀಕರೊಂದಿಗೆ ಚರ್ಚೆ ನಡೆಸಿದ್ದು, ಬಹುತೇಕ ಅಗಲೀಕರಣಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
೫೦ ಅಡಿಗೆ ಅಗಲೀಕರಣಕ್ಕೆ ಎಲ್ಲಿ ಎಷ್ಟು ಸ್ಥಳ ಲಭ್ಯದ ಬಗ್ಗೆ ಇಂದು ಪರಿಶೀಲಿಸಲಾಯಿತು. ಅಲ್ಲದೇ ಸ್ಥಳೀಯ ನಿವಾಸಿಗಳ ಆರ್ಥಿಕ ಪರಿಸ್ಥಿತಿ ಮತ್ತು ಅವರ ವಾಸಿಸುವ ಸ್ಥಳ ವಿಸ್ತರಣೆ ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತದೆ. ತೀನ್ ಕಂದಿಲ್ ನಿಂದ ಫಾರ್ಚೂನ್ ಆಸ್ಪತ್ರೆವರೆಗೆ ರಸ್ತೆಗೆ ಸ್ಥಳ ಲಭ್ಯತೆ ಹಾಗೂ ಫಾರ್ಚೂನ್‌ನಿಂದ ನರಸುಬಾಯಿ ಆಸ್ಪತ್ರೆವರೆಗೆ ರಸ್ತೆ ಸ್ಥಳದ ಲಭ್ಯತೆ ಹಾಗೂ ನಂತರ ಅಶೋಕಡಿಪೋ ವರೆಗಿನ ಅಗಲೀಕರದ ವ್ಯವಸ್ಥೆ ಪರಿಶೀಲಿಸಲಾಯಿತು. ರಸ್ತೆ ಎರಡೂ ಬದಿ ಇರುವ ಕಟ್ಟಡಗಳ ಮಧ್ಯದ ಅಂತರವನ್ನು ಇಂದು ಅಳತೆ ಮಾಡಲಾಯಿತು. ಸ್ಥಳೀಯರ ಕುಂದು ಕೊರತೆಗಳನ್ನು ನಿವಾರಿಸುವ ಮೂಲಕ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಈ.ವಿನಯ್ ಕುಮಾರ್ ಅವರು ತಿಳಿಸಿದ್ದಾರೆ.
ಇಂದು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಪೌರಾಯುಕ್ತ ದೊಡ್ಡಮನಿ, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.