ಮಚ್ಚಿನಿಂದ ಹೊಡೆದು ಸೋದರ ಸಂಬಂಧಿ ಕೊಲೆಗೆ ಯತ್ನ

ಕಲಬುರಗಿ,ಜು.19-ವ್ಯಕ್ತಿಯೊಬ್ಬ ಸೋದರ ಸಂಬಂಧಿಯನ್ನು ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ ಕಮ್ಮನ (45) ಎಂಬುವವರಿಗೆ ಸೋದರ ಸಂಬಂಧಿ ಭೀಮಶಾ ಕಮ್ಮನ ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.
ಮಲ್ಲಿಕಾರ್ಜುನ ಕಮ್ಮನ ಮತ್ತು ಭೀಮಶಾ ಕಮ್ಮನ ಅವರು ಸೋದರ ಸಂಬಂಧಿಗಳಾಗಿದ್ದು, ಮನೆಯ ಜಾಗದ ವಿಷಯದಲ್ಲಿ ಇಬ್ಬರ ನಡುವೆ ತಕರಾರಿತ್ತು. ಇದೇ ವಿಷಯಕ್ಕೆ ಆಗಾಗ ಕಿರಿಕಿರಿ ನಡೆದಿತ್ತು. ಮಲ್ಲಿಕಾರ್ಜುನ ಕಮ್ಮನ ಅವರು ಪತ್ನಿ ಜೊತೆಗೆ ನೀರು ತರಲು ಹೋದ ವೇಳೆ ಭೀಮಶಾ ಕಮ್ಮನ ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಜಗಳ ತೆಗೆದು ತಲೆಗೆ ಮತ್ತು ಎಡಗಾಲಿಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.