ರಾಯಚೂರು,ಜೂ.೧೪-ತಿರುಪತಿಯಿಂದ ಮಂತ್ರಾಲಯ ಮತ್ತು ಮಂತ್ರಾಲಯದಿಂದ ತಿರುಪತಿಗೆ ಪ್ರತಿನಿತ್ಯ ಪ್ಯಾಸೆಂಜರ್ ರೈಲು ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಸಾರ್ವಜನಿಕರ ಪರವಾಗಿ ರೈಲ್ವೆ ಬೋರ್ಡ್ ಸದಸ್ಯರಾದ ಬಾಬುರಾವ್ ಧನ್ಯವಾದ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆಂಧ್ರಪ್ರದೇಶದಿಂದ ಬಂದು ಇಲ್ಲಿ ನೆಲೆಸಿದ ಸಾಕಷ್ಟು ಜನರು ಪ್ರತಿನಿತ್ಯ ಒಂದಾನೊಂದು ಕೆಲಸಕ್ಕಾಗಿ ತಮ್ಮ ಮೂಲ ಸ್ಥಳವಾದ ವಿಜಯವಾಡ ಹಾಗೂ ಇತರ ಸ್ಥಳಗಳಿಗೆ ಬಸ್ಸಿನ ಮೂಲಕ ಓಡಾಡಲು ಕಷ್ಟ ಸಾಧ್ಯವಾದ್ದರಿಂದ ರೈಲು ಸಂಚಾರಕ್ಕಾಗಿ ಸಂಸದ ರಾಜಾ ಅಮರೇಶ್ವರ ನಾಯಕರವರ ಬಳಿ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು.
ಈ ಕುರಿತು ಸಂಸದ ರಾಜಾ ಅಮರೇಶ್ವರ ನಾಯಕ, ದೆಹಲಿಯ ರೈಲ್ವೆ ಕೇಂದ್ರ ಸಚಿವರಿಗೆ ಹಾಗೂ ಜನರಲ್ ಮ್ಯಾನೇಜರ್ ಸೌತ್ ಸೆಂಟ್ರಲ್ ರೈಲ್ವೆ ಸಿಕಂದ್ರಾಬಾದ್ ಅವರಿಗೆ ಪತ್ರ ಬರೆದು ಹಾಗೂ ದೂರವಾಣಿ ಮೂಲಕ ಕರೆ ಮಾಡಿ ಕೋರಿದ ಪ್ರಯುಕ್ತ, ಪ್ರಸ್ತುತ ಕರ್ನೂಲ್ ಸಿಟಿಯವರಿಗೆ ಟ್ರೈವಿಕ್ಲಿ ಓಡಾಡುತ್ತಿದ್ದ ಟ್ರೈನ್ ನಂಬರ್ ೦೭೦೬೭ ಹಾಗೂ ೦೭೦೬೮ ಮಚಲಿ ಪಟ್ಟಣಂ ಟ್ರೈನನ್ನು ಮಂತ್ರಾಲಯ ಮಠದವರೆಗೆ ವಿಸ್ತರಣೆ ಮಾಡಲು ಅಧಿಕೃತವಾಗಿ ಸೌತ್ ಸೆಂಟ್ರಲ್ ರೈಲ್ವೆಯು ಒಪ್ಪಿಗೆ ನೀಡಿದ್ದು ಸದರಿ ಟ್ರೈನ್ ಶೀಘ್ರವಾಗಿ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ.
ಈ ಟ್ರೈನ್ ಮಚಲಿ ಪಟ್ಟಣದಿಂದ ಬೆಳಿಗ್ಗೆ ೭:೦೦ಗೆ ಬಿಟ್ಟು ವಯಾ ವಿಜಯವಾಡ, ಕರ್ನೂಲ್ ಸಿಟಿ, ಗದ್ವಾಲ್, ರಾಯಚೂರುಗೆ ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ತಲುಪಿ ನಂತರ ಮಂತ್ರಾಲಯಗೆ ೪.೨೫ಕ್ಕೆ ಸೇರಲಿದೆ. ಸಂಸದರ ನಿರಂತರ ಪ್ರಯತ್ನದಿಂದಾಗಿ ಈ ಟ್ರೈನಿನ ವಿಸ್ತರಣೆಗೆ ಒಪ್ಪಿಗೆ ನೀಡಿರುವುದರಿಂದ ಜಿಲ್ಲೆಯಲ್ಲಿ ವಾಸವಿರುವ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಈ ಭಾಗದ ಜನರಿಗೆ ಅನುಕೂಲವಾಗುವುದು ಎಂದು ರೈಲ್ವೆ ಬೋರ್ಡ್ ಸದಸ್ಯರಾದ ಬಾಬುರಾವ್ ಹರ್ಷ ವ್ಯಕ್ತಪಡಿಸಿದರು.