ಮಗ ಯೋಗಿಗೆ ಡ್ರಗ್ಸ್ ಚಟವಿಲ್ಲ : ಅಂಬುಜಾ

ಬೆಂಗಳೂರು, ಸೆ 22- ಸ್ಯಾಂಡಲ್‍ವುಡ್‍ ಗೆ ನಶೆಯ ನಂಟು ಪ್ರಕರಣವನ್ನು ಜಾಲಾಡಲು ಸಿಸಿಬಿ ಹಾಗೂ ಐಎಸ್ ಡಿ ಪಣ ತೊಟ್ಟಿರುವಂತೆ ಕಾಣುತ್ತಿದ್ದು, ಹಿರಿತೆರೆ ಹಾಗೂ ಕಿರುತೆರೆಯ ನಟ, ನಟಿಯರಿಗೆ ನೋಟಿಸ್ ನೀಡಿ ಮಾಹಿತಿ ಪಡೆಯಲು ಮುಂದಾಗಿದೆ.

ಏತನ್ಮಧ್ಯೆ ಸೋಮವಾರ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ) ವಿಚಾರಣೆಗೆ ಹಾಜರಾಗಿರುವ ಲೂಸ ಮಾದ ಎಂದೇ ಕರೆಸಿಕೊಳ್ಳುವ ನಟ ಯೋಗೀಶ್‍ ಅವರ ತಾಯಿ ಹಾಗೂ ಕಿರುತೆರೆ ನಟಿ ಅಂಬುಜಾ, ನನ್ನ ಮಗನಿಗೆ ನಶೆಯ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನನ್ನ ಮಗ ಯೋಗಿ ಮಾದಕ ವ್ಯಸನಿಯಲ್ಲ. ಸ್ನೇಹಿತರೂ ಕೂಡ ಕಡಿಮೆ. ಅವನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಐಎಸ್‍ಡಿ ತನಿಖೆಗೆ ಸಂಬಂಧಿಸಿ ಹೆದರುವ ಅಗತ್ಯವಿಲ್ಲ. ಮತ್ತೆ ವಿಚಾರಣೆಗೆ ಕರೆದರೂ ಹಾಜರಾಗುತ್ತಾನೆ” ಎಂದಿದ್ದಾರೆ.
ಲೂಸ್ ಮಾದ ಅವರ ತಂದೆ ಸಿದ್ದರಾಜು ಮಾತನಾಡಿ, ಶನಿವಾರ ಸಂಜೆಯ ವೇಳೆಗೇನೆ ಯೋಗಿಗೆ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್ ಸಿಕ್ಕ ಬಳಿಕ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ನನ್ನ ಮಗ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಆದ್ದರಿಂದ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಯೋಗಿ ತನ್ನ ಜೀವನದಲ್ಲಿ ವಿಚಲಿತನಾಗಲು ನಾನೇ ಕಾರಣ ಎನ್ನಿಸುತ್ತಿದೆ. ಏಕೆಂದರೆ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳಲು ಬಲವಂತ ಮಾಡುತ್ತಿದ್ದೆ. ಸಾಲು ಸಾಲು ಸೋಲುಗಳು ಯೋಗಿಯನ್ನು ನೋವಿಗೆ ದೂಡಿತ್ತು ಅಷ್ಟೇ ಎಂದು ಹೇಳಿದ್ದಾರೆ.
ಯೋಗಿಗೆ ಬೇರೆ ಯಾವುದೇ ಡ್ರಗ್ಸ್ ಅಭ್ಯಾಸವಿಲ್ಲ. ಖುಷಿಯಾದ ಸಂದರ್ಭದಲ್ಲಿ ಡ್ರಿಂಕ್ಸ್ ಮಾಡ್ತಾನೆ, ಸಿಗರೇಟ್ ಸೇದುತ್ತಾನೆ ಅಷ್ಟೇ. ಪೊಲೀಸರು ಸಂಶಯ ಪಡುವ ರೀತಿಯಲ್ಲಿ ಯಾವುದೇ ಘಟನೆ ನಡೆದಿಲ್ಲ. ವಿಚಾರಣೆಯನ್ನು ಯಶಸ್ವಿಯಾಗಿ ಎದುರಿಸಿದ್ದಾನೆ ಎಂದು ತಾಯಿ ಅಂಬುಜಾ ತಿಳಿಸಿದ್ದಾರೆ.
ಆತನ ಸಿನಿಮಾ ಸೋಲುಗಳಿಂದ ಹಾಗೂ ಹಲವು ಸಿನಿಮಾಗಳಲ್ಲಿ ಶೂಟಿಂಗ್ ಮಾಡಿದ್ದರೂ ಹಣ ನೀಡಿರಲಿಲ್ಲ. ಇದು ಯೋಗಿಗೆ ಹೆಚ್ಚು ಬೇಸರ ಮಾಡಿತ್ತು. ಈಗ ಆತ ಉತ್ತಮ ಕಥೆ ಆಯ್ಕೆ ಮಾಡಿಕೊಂಡು ಮತ್ತೆ ಕನ್ನಡದ ಅಭಿಮಾನಿಗಳ ಮುಂದೇ ಬರುತ್ತಾನೆ. ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿ ಹೆದರುವ ಅಗತ್ಯವಿಲ್ಲ ಎಂದಿದ್ದಾರೆ.