ಮಗು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ ನಗದು ಬಹುಮಾನ

ಮುಂಬೈ, ಏ.೨೧- ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಹಳಿ ಮೇಲೆ ಬಿದ್ದ ಮಗುವೊಂದನ್ನು ರಕ್ಷಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದ ರೈಲ್ವೇ ಇಲಾಖೆಯ ಸಿಬ್ಬಂದಿಗೆ ಇದೀಗ ಕೇಂದ್ರ ರೈಲ್ವೇ ಸಚಿವಾಲಯವು ನಗದು ಬಹುಮಾನ ಘೋಷಿಸಿದೆ.
ಆಯತಪ್ಪಿ ಹಳಿ ಮೇಲೆ ಮಗು ಬಿದ್ದಿದ್ದು, ಇನ್ನೇನು ರೈಲು ಬಂದೇ ಬಿಟ್ಟಿತು ಅನ್ನುವಷ್ಟರಲ್ಲಿ ರೈಲ್ವೆ ಸಿಬ್ಬಂದಿ ರೈಲ್ವೇ ಪಾಯಿಂಟ್ಸ್‌ಮೆನ್ ಮಯೂರ್ ಶೆಲ್ಕೆ ಎಂಬವರು ಮಗುವಿನ ಜೀವ ಉಳಿಸಿದ್ದರು. ಬಳಿಕ ಪ್ರಾಣ ಉಳಿಸಿದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಟ್ವೀಟ್ ಮಾಡಿದ್ದ ಕೇಂದ್ರ ರೈಲ್ವೆ, “ವಂಗಾನಿ ರೈಲ್ವೆ ಸ್ಟೇಷನ್‌ನಲ್ಲಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಗುವೊಂದು ಆಯತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದಿದೆ. ಆಗ ಮುಂಬೈ ವಿಭಾಗದ ಮಯೂರ್ ಶೆಲ್ಕೆ ಅವರು ಮಗುವನ್ನು ರಕ್ಷಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ” ಎಂದು ಹೇಳಿ ಘಟನೆಯ ವಿಡಿಯೊವನ್ನು ಹಂಚಿಕೊಂಡಿದೆ. ಇನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿ, “ಅಸಾಧಾರಣ ಧೈರ್ಯಶಾಲಿ ಕಾರ್ಯವನ್ನು ಮಾಡಿದ ಮುಂಬೈನ ವಂಗಾನಿ ರೈಲ್ವೆ ನಿಲ್ದಾಣದ ರೈಲ್ವೆಮ್ಯಾನ್ ಮಯೂರ್ ಶೆಲ್ಖೆ ಅವರ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಮತ್ತು ಮಗುವಿನ ಜೀವವನ್ನು ಉಳಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ರೈಲ್ವೇ ಸಚಿವಾಲಯವು ಮಯೂರ್ ಅವರಿಗೆ ೫೦ ಸಾವಿರ ರೂ.ಗಳ ಮೊತ್ತವನ್ನು ಬಹುಮಾನ ರೂಪವಾಗಿ ಘೋಷಿಸಿದೆ.