
ಕಲಬುರಗಿ:ಆ.27: ಪತಿಯ ಕಿರುಕುಳಕ್ಕೆ ಬೇಸತ್ತು ತವರು ಮನೆ ಸೇರಿದ್ದ ಪತ್ನಿಯ ಮನೆಗೂ ಗುಂಪು ಕಟ್ಟಿಕೊಂಡು ದಾಳಿ ಮಾಡಿದ ವ್ಯಕ್ತಿಯೊಬ್ಬ ಬೀಗರ ಮನೆಯಲ್ಲಿ ತನ್ನ ಅತ್ತೆ, ಮಾವ ಹಾಗೂ ಪತ್ನಿ ಮೇಲೆ ಹಲ್ಲೆ ಮಾಡಿ ತನ್ನ ಪುತ್ರನಿಗೆ ಅಪಹರಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಯಚೂರು ಮೂಲದ ನಾಗರಾಜ್ ಎಂದು ತಿಳಿದುಬಂದಿದೆ. ಅಪಹರಿಸಲು ಬಂದವರ ಹೆಸರು ತನಗೆ ಗೊತ್ತಿಲ್ಲ. ತಾನು ಹೈದ್ರಾಬಾದ್‍ನಿಂದ ಬಂದಿರುವೆ ಎಂದು ಆರೋಪಿ ಪೋಲಿಸರಿಗೆ ಹೇಳಿದ್ದಾನೆ ಎನ್ನಲಾಗಿದೆ.
ಆರೋಪಿ ತಂದೆಯೇ ತನ್ನ ಮಗನಿಗೆ ಅಪಹರಿಸಲು ಎರಡು ಕಾರುಗಳಲ್ಲಿ 8 ಜನರ ಗುಂಪು ಕಟ್ಟಿಕೊಂಡು ಚಿಂಚೋಳಿ ತಾಲ್ಲೂಕಿನ ಯಂಪಳ್ಳಿ ಗ್ರಾಮಕ್ಕೆ ಬಂದು ಪತ್ನಿ, ಅತ್ತೆ, ಮಾವನ ಮೇಲೆ ಹಲ್ಲೆ ಮಾಡಿ ತನ್ನ ಮಗುವನ್ನು ಅಪಹರಿಸಿಕೊಂಡು ಹೋಗಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಕೈಗೆ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದು, ಆತನಿಗೆ ಕೈಕಾಲು ಕಟ್ಟಿ ಹಾಕಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಪತ್ನಿ ಗೌರಮ್ಮ ಸಮೀಪದ ನೆರೆಯ ಬೀದರ್ ಜಿಲ್ಲೆಯ ಚಿಟಗುಪ್ಪಾ ಗ್ರಾಮದ ಯುವಕನೊಂದಿಗೆ ಮದುವೆಯಾಗಿದ್ದಳು. ಮದುವೆಯ ನಂತರ ಕೆಲ ದಿನಗಳಲ್ಲಿ ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದುದರಿಂದ ತವರು ಮನೆಯವರು ಆಕೆಯನ್ನು ಕರೆದುಕೊಂಡು ಬಂದಿದ್ದರು.
ತವರು ಮನೆಯಲ್ಲಿ ಗಂಡು ಮಗುವಿಗೆ ಗೌರಮ್ಮ ಜನ್ಮ ನೀಡಿದ್ದು, ಹೆರಿಗೆಯ ನಂತರ ಮಗು ನೀಡುವಂತೆ ಅಳಿಯ ಪೀಡಿಸುತ್ತಿದ್ದ. ಹೀಗಾಗಿ ಭಾನುವಾರ ಹಠಾತ್ತನೇ ಬಂದು ಮಗುವನ್ನು ಅಪಹರಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಮಗುವಿನೊಂದಿಗೆ ಸಮೀಪದ ಕೊತ್ತಾಪುರ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ಕೆಲ ದಿನಗಳ ಹಿಂದೆ ಕೊತ್ತಾಪುರಕ್ಕೆ ಹೋದಾಗಲೂ ಮಗು ಅಪಹರಿಸಲು ಯತ್ನಿಸಿದ್ದ ಎನ್ನಲಾಗಿದೆ.
ಈ ಕುರಿತು ಎಸ್‍ಐ ಹಣಮಂತ್ ಬಂಕಲಗಿ ಅವರು ಪ್ರತಿಕ್ರಿಯಿಸಿ ಗ್ರಾಮಸ್ಥರ ಮಾಹಿತಿ ಮೇರೆಗೆ ಪೋಲಿಸರಿಗೆ ಯಂಪಳ್ಳಿಗೆ ಕಳಿಸಿದ್ದೇವೆ. ಪತಿ, ಪತ್ನಿ ನಡುವೆ ಜಗಳವಿದೆ ಎಂದು ತಿಳಿಸಿದ್ದಾರೆ.