ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆ ಪ್ರಕರಣ: ತಾಯಿಯ ಬಂಧನ


ಕಾಸರಗೋಡು, ಜ.೬- ಒಂದೂವರೆ ವರ್ಷದ ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿರುವ ತಾಯಿಯನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತ ಮಹಿಳೆ ಮಗುವನ್ನು ಕೊಲೆಗೈದಿರುವುದಾಗಿ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾಳೆ.
ಪೆರ್ಲ ಕಾಟುಕುಕ್ಕೆ ಪೆರ್ಲತ್ತಡ್ಕದ ಶಾರದಾ (೨೫) ಬಂಧಿತಳು. ಡಿ. ೪ ರಂದು ಈಕೆಯ ಪುತ್ರ ಸ್ವಸ್ತಿಕ್‌ನ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿತ್ತು. ಪತಿ ಬಾಬು ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿತ್ತು. ಮಗು ನಾಪತ್ತೆಯಾದುದ್ದರಿಂದ ಪರಿಸರವಾಸಿಗಳು ಶೋಧ ನಡೆಸಿದಾಗ ಮನೆಯ ಅಲ್ಪ ದೂರದ ಪಾಳು ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಗುವನ್ನು ಬಾವಿಗೆಸೆದು ಕೊಲೆಗೈದಿರುವುದಾಗಿ ಸಾಬೀತಾಗಿತ್ತು. ಪುತ್ತೂರುಲಿನಲ್ಲಿರುವ ತಾಯಿ ಮನೆಗೆ ತೆರಳಿದ್ದ ಶಾರದಾಳನ್ನು ಬದಿಯಡ್ಕ ಠಾಣಾ ಪೊಲೀಸರು ವಿಚಾರಣೆಗೊಳಪಡಿಸಿದ್ದು, ವಿಚಾರಣೆ ವೇಳೆ ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಈಕೆ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದರೂ ಮರಣೋತ್ತರ ಪರೀಕ್ಷೆಯಿಂದ ಕೊಲೆ ಎಂದು ಬೆಳಕಿಗೆ ಬಂದಿತ್ತು. ಶಾರದಾ ಮಾನಸಿಕ ಅಸ್ವಸ್ಥತೆ ವ್ಯಕ್ತಪಡಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆರೋಪಿಯನ್ನು ಕಾಸರಗೋಡು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ೧೪ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.