ಮಗುವಿನ ಭದ್ರಬುನಾದಿ ಜೀವನಕ್ಕೆ ಶಾಲಾಪೂರ್ವ ಶಿಕ್ಷಣ ನೀಡಿ

ವಾಡಿ:ಡಿ.22: 3 ರಿಂದ 6 ವರ್ಷದ ಮಗು ಶಾಲೆ ಪ್ರವೇಶಕ್ಕಿಂತ ಮೊದಲು ಕಲಿಯುವ ಕಲಿಕೆ ಮಗುವಿನ ಜೀವನಕ್ಕೆ ಭದ್ರ ಬುನಾದಿಯಾಗುತ್ತದೆ. ಎಂದು ಸಮುದಾಯ ಅಭಿವೃದ್ಧಿ ಸಂಘಟನೆಯ ತಾಲೂಕ ಸಂಯೋಜಕ ಮಲ್ಲಿಕಾರ್ಜುನ ಬೋಯಿನ್ ಹೇಳಿದರು.

ಚಿತ್ತಾಪೂರ ತಾಲ್ಲೂಕಿನ ರಾವೂರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಕೆಕೆಆರ್‍ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ 3 ದಿನಗಳ 3ನೇ ಹಂತದ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಗಾರವನ್ನು ಉಧ್ಘಾಟಿಸಿ ಮಾತನಾಡುತ್ತಾ ಸ್ಥಳಿಯ ಸಂಪನ್ಮೂಲಗಳಿಂದ ಹೇಗೆ ಮಗುವಿಗೆ ಶಿಕ್ಷಣವನ್ನು ಉಲ್ಲಾಸಮಯವಾಗಿ, ಆಸಕ್ತಿದಾಯಕವಾಗಿ ಬೋಧಿಸಬೇಕೆಂಬುದನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಶಾಲಾ ಪೂರ್ವ ಶಿಕ್ಷಣವನ್ನು 7 ಹಂತದ ತರಬೇತಿಯಲ್ಲಿ ಕಲಿಸಿಕೊಡಲಾಗುತ್ತದೆ. ಒಟ್ಟು 7 ಹಂತಗಳ ಶಿಕ್ಷಣದಲ್ಲಿ 5 ನೇ ಹಂತದ ಶಿಕ್ಷಣ ನೀಡಬೇಕಾಗಿತ್ತು ಆದರೆ ಕೋರೊನಾ ರೋಗದ ಹಿನ್ನಲೆಯಲ್ಲಿ 3 ನೇ ಹಂತದ ತರಬೇತಿ ನಡೆಯುತ್ತಿದೆ. ಕಾರ್ಯಕರ್ತೆಯರಿಗೆ ಚರ್ಚೆ, ಕಥೆ, ಕ್ರೀಯಾತ್ಮಕ ಚಿಂತನೆಗಳ ಕುರಿತು ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾವೂರ ಎ ವಲಯದ ಅಂಗನವಾಡಿ ಮೇಲ್ವಿಚಾರಕಿ ಸುಮಿತಾ ಬಿರಾದಾರ ಮಾತನಾಡಿ 3 ದಿನಗಳ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ತರಬೇತಿಯಲ್ಲಿ ತಾವೇಲ್ಲರೂ ಹೆಚ್ಚು ಆಸಕ್ತಿಯಿಂದ ಕಲಿಯಬೇಕು ಮತ್ತು ಕಲಿತದ್ದನ್ನು ಮಕ್ಕಳು ಬಂದ ನಂತರ ಅವರಲ್ಲಿ ಪರಿಣಾಮಕಾರಿಯಾಗಿ ಮೂಡಿಸಬೇಕು. ಮಗು ಅಂಗನವಾಡಿಗಳಿಗೆ ಆಕರ್ಷಿತರಾಗಲು ಇಂತಹ ಶಿಕ್ಷಣ ಅಗತ್ಯ ಎಂದು ಹೇಳಿದರು. ಮಕ್ಕಳಿಗೆ ಪೌಷ್ಠಿಕಾಂಶ ಆಹಾರದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲು ಇಂತಹ ತರಬೇತಿಯನ್ನು ನಿಮಗೆ ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮುಖ್ಯಗುರು ವಿಧ್ಯಾಧರ ಖಂಡಾಳ ವೇದಿಕೆ ಮೇಲಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸಿದ್ಧಲಿಂಗ ಬಾಳಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ರಾವೂರ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.