ಮಗುವಿನ ನಾಮಕರಣ ದಲ್ಲಿ ಮತದಾನದ ಅರಿವು

ಬೀದರ:ಎ.9:ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಮತದಾನವು ಬರುವ ಮೇ ತಿಂಗಳ ಹತ್ತರಂದು ನಡೆಯಲಿದೆ. ಸಂವಿಧಾನದಿಂದ ಕೊಡ ಮಾಡಲ್ಪಟ್ಟಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ, ರಾಜ್ಯದ ಅಭಿವೃದ್ಧಿಯ ಗುರಿ ಹೊಂದಿರುವ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಬೇಕೆಂದು ಬೀದರ್ ಪಶುವೈದ್ಯಕೀಯ ವಿಶ್ವ ವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ರವರು ಜನತೆಗೆ ಕರೆ ನೀಡಿದರು. ಅವರು ನಗರದ ವೈಷ್ಣವೀ ಕನ್ವೆನ್ಷನ್ ಹಾಲ್ ನಲ್ಲಿ, ಪೂಜಾ- ಶ್ರಿಕಾಂತ ಸಾಮ್ರಾಟ ಚಿದ್ರಿಯವರ ಮಗಳ ನಾಮಕರಣದಲ್ಲಿ ಭಾಗವಹಿಸಿ, ನೆರೆದ ಜನರಿಗೆ ಮನವಿ ಮಾಡಿದರು. ಪ್ರಜೆಗಳ, ಪ್ರಜೆ ಗಳಿಗಾಗಿ ಹಾಗೂ ಪ್ರಜೆಗಳಿಂದ ನಡೆಯುವ ಸರಕಾರದ ಅಡಿಪಾಯವೇ ಮತದಾನ.

ನಮಗಿರುವುದು ಕೇವಲ ಒಂದು ವೋಟು. ಅದರಿಂದ ಏನಾಗುತ್ತದೆ. ಮತದಾನ ಮಾಡುವವರು ಬಹಳಷ್ಟು ಜನ ಇದ್ದಾರೆ. ನನ್ನ ಒಂದು ವೋಟಿನಿಂದ ಯಾವ ವ್ಯತ್ಯಾಸವೂ ಆಗದು. ನಾನು ಮತದಾನ ಮಾಡದಿದ್ದರೂ ನಡೆಯುತ್ತದೆ ಎನ್ನುವ ಅಸಡ್ಡೆ ಬೇಡ. ಒಂದು ಮತ ಕಡಿಮೆಯಾಗಿ ಅನೇಕ ಸಂದರ್ಭಗಳಲ್ಲಿ ಸರಕಾರಗಳೇ ಬಿದ್ದು ಹೋಗಿರುವ ಉದಾಹರಣೆಗಳಿವೆ ಎಂದು ತಿಳಿಸಿದರು. “ನಮ್ಮ ಮತ ಮಾರಾಟಕ್ಕಲ್ಲ. ರಾಜ್ಯದ ಅಭಿವೃದ್ಧಿಯ ಉದ್ದೇಶ ವನ್ನು ಹೊಂದಿರುವವರಿಗೆ ನಮ್ಮ ಮತ ” .. ಇತ್ಯಾದಿ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡು, “ಯಾವುದೇ ತರಹದ ಪ್ರಲೋಭನೆಗಳಿಗೆ ಒಳಗಾಗದೇ, ಕಡ್ಡಾಯವಾಗಿ ಮತದಾನ ಮಾಡುವೆವು” ಎಂಬ ಪ್ರತಿಜ್ಞೆ ಬೊಧಿಸಿದರು. ನಿವೃತ್ತ ಅಧಿಕಾರಿ ನಾರಾಯಣರಾವ್ ಕಾಂಬಳೆಯವರು ಜಾಗೃತಿ ಗೀತೆಯನ್ನು ಹಾಡಿದರು. ಗಣಪತಿ-ದಾಶಮ್ಮ, ಮನೋಜ, ಗೌತಮ್ ಗಣಪತಿ, ಶೃತಿ, ಪೂಜಾಶ್ರಿ, ಪಂಢರಿ, ಸರಸ್ವತಿ, ಶೋಭಾ, ಈಶ್ವರ ಮುಂತಾದವರು ಹಾಜರಿದ್ದರು.