ಮಗುವಿನ ನಗುವಿನಲ್ಲಿ ತಾಯಿಯ ಸ್ವರ್ಗ ಅಡಗಿದೆ

ಭಾಲ್ಕಿ: ಮಾ.13:57ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವು ಶ್ರೀದೇವಿ ಶಾಂತಯ್ಯ ಸ್ವಾಮಿ ಅವರ ಮನೆಯಲ್ಲಿ ನೆರವೇರಿತು. ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು ಅವರ ದಿವ್ಯ ಸಾನಿಧ್ಯದಲ್ಲಿ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಅವರ ಮಾರ್ಗದರ್ಶನದಲ್ಲಿ ಪೂಜ್ಯಶ್ರೀ ಮಹಾಲಿಂಗದೇವರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು. ಬಳಿಕ ಶ್ರೀಗಳು ಆಶೀರ್ವಚನವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವರಾಧ್ಯ ಸತ್ಯಂಪೇಟೆ ಅವರು ಮಾತನಾಡಿದರು. ಅನುಭಾವ ನುಡಿಯನ್ನು ಶ್ರೀದೇವಿ ವಿಜಯಕುಮಾರ ಪಾಟೀಲ್ ಅವರು ತಾಯಿಯ ಮಮತೆ ಕುರಿತು ಮಾತನಾಡಿದರು. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ಒಂದು ಮಗು ಸಂಸ್ಕಾರವಂತ ರಾಗಿ ಜಗತ್ತಿಗೆ ಬರಬೇಕಾದರೆ ಅಲ್ಲಿ ತಾಯಿಯ ಪಾತ್ರ ಬಹಳ ಮಹತ್ವದ್ದು. ಏಕೆಂದರೆ ತಾಯಿ ಆ ಮಗುವಿನಲ್ಲಿ ಒಳ್ಳೆಯ ಅಂಶಗಳನ್ನು ಬಿತ್ತಿ ತಿದ್ದಿ ತೀಡಿ ಒಂದು ಶಿಲ್ಪಿ ಹೇಗೆ ಬರಿ ಕಲ್ಲನ್ನು ಶಿಲೆಯಾಗಿ ಮಾಡುವನೆ ಹಾಗೆ ತಾಯಿ ಮಗುವನ್ನು ಆತನ ತಪ್ಪು ಒಪ್ಪುಗಳನ್ನು ತಿದ್ದಿ ತೀಡಿ ಬುದ್ದಿ ಹೇಳಿ ಒಳ್ಳೆಯ ದಾರಿಯಲ್ಲಿ ಸಾಗಲು ಸಹಾಯ ಮಾಡುತ್ತಾಳೆ. ತಾಯಿ ತ್ಯಾಗಮಯಿ, ಪ್ರೀತಿ ವಾತ್ಸಲ್ಯದ ಗಣಿ, ತಾಯಿ ಮಗುವನ್ನು ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಕಣ್ಣಲ್ಲಿ ಕಣ್ಣಿಟ್ಟು ಸಲಹಿ ರಕ್ಷಿಸಿ ದೊಡ್ಡವರನ್ನಾಗಿ ಮಾಡುವದರ ಜೊತೆಗೆ ಸುಸಂಕೃತರಾಗಿ ಮಾಡುವರು. ಕಣ್ಣರಿಯದಿದ್ದರು ಕರುಳರಿಯಿತು ಎನ್ನುವಂತೆ ತಾಯಿ ಮಗುವಿನ ಬೇಕು ಬೇಡಗಳನ್ನು ಸಂಕಟ ನೋವು ನಲಿವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಹೊಂದಿರುವ ದೇವಿ.ಇಂದು ನಾವು ತಾಯಿಯರು ಮಗುವಿಗೆ ಸಮಯವಿತ್ತು ಅದಕ್ಕೆ ಹೊಸ ಹೊಸ ಗ್ಯಾಜೆಟ್ಗಳನ್ನು ತಂದು ಕೊಡುವುದು ಇಂದಿನ ಪೀಳಿಗೆಯ ಜೊತೆಗೆ ಸರಿಸಮರನ್ನಾಗಿ ಮಾಡುವುದು ಅಷ್ಟೇ ಅಲ್ಲಾ ಮಗುವಿನ ಜೊತೆಗೆ ಒಂದಷ್ಟು ಉತ್ತಮ ಕಾಲ ಕಳೆದು ಅದಕ್ಕೆ ಪ್ರೀತಿ ಮಮತೆ ವಾತ್ಸಲ್ಯದಿಂದ ಇರುವ ಅವಶ್ಯಕತೆ ಇದೆ ಎಂದು ಹೇಳಿದರು. ಬಸವ ಪ್ರಾರ್ಥನೆ ಶ್ರೀ ಮಲ್ಲಮ್ಮ ನಾಗನಕೆರೆಯವರು ನಡೆಸಿಕೊಟ್ಟರು. ವಚನ ಪಠಣವನ್ನು ರೂಪ ಧೂಳೆ ನಡೆಸಿದರು. ಶ್ರೀ ಶಾಂತಯ್ಯ ಸ್ವಾಮಿ ಸ್ವಾಗತಿಸಿದರು. ಕವನಾ ಶಾಂತಯ್ಯ ಸ್ವಾಮಿ ಸ್ವಾಗತ ಗೀತೆ ಹಾಡಿದರು. ಶ್ರೀದೇವಿ ವಿಜಯಕುಮಾರ್ ಪಾಟೀಲ್ ಅವರಿಗೆ ವಿಶೇಷ ಗೌರವ ಸನ್ಮಾನ ನೆರವೇರಿತು. ಇದೇ ಸಂದರ್ಭದಲ್ಲಿ ಅನೇಕರನ್ನು ಗೌರವಿಸಲಾಯಿತು. ಶ್ರೀ ಬಸವರಾಜ್ ಮರೆ, ರೇಖಾಬಾಯಿ ರಾಜಶೇಖರ್ ಆಸ್ಟುರೆ, ಜಯಪ್ರಕಾಶ ಕುಂಬಾರ್, ವೈಜಿನಾಥ ಕುಂಬಾರ್, ಬಾಬುರಾವ್ ಹುಣಜೆ, ಬಸವಶ್ರೀ ಮಾಳಗೆ ಹಾಗೂ ಅನೇಕರು ಉಪಸ್ಥಿತರಿದ್ದರು. ಶ್ರೀ ಮಲ್ಲಿಕಾರ್ಜುನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.