ಮುಂಬೈ,ಸೆ.೨೬-ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಮನೆಗೆ ಪುಟ್ಟ ಮುದ್ದಾದ ಕಂದನ ಆಗಮನವಾಗಿದೆ. ಶನಿವಾರ, ಸೆಪ್ಟೆಂಬರ್ ೨೩ ರಂದು, ಸ್ವರಾ ತನ್ನ ಮೊದಲ ಮಗಳಿಗೆ ಜನ್ಮ ನೀಡಿದ್ದು, ಅವರ ಪತಿ ಫಹಾದ್ ಅವರು ನವಜಾತ ಶಿಶುವಿನೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಪ್ರಾರ್ಥನೆ ಫಲ ನೀಡಿದೆ, ನಮ್ಮ ಮಗಳು ೨೩ ಸೆಪ್ಟೆಂಬರ್ ೨೦೨೩ ರಂದು ಜನಿಸಿದ್ದು. ಇದು ನಮ್ಮಿಬ್ಬರಿಗೂ ಹೊಸ ಪ್ರಪಂಚ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಫೋಟೋ ಜೊತೆಗೆ, ಸ್ವರಾ ಮತ್ತು ಫಹದ್ ತಮ್ಮ ಮಗಳ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ.
ಮಗಳಿಗೆ ರಬಿಯಾ ಎಂದು ಹೆಸರು ಇಡಲಾಗಿದೆ. ರಬಿಯಾ ಉರ್ದು ಹೆಸರಾಗಿದೆ.
ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರೊಂದಿಗೆ ಕಳೆದ ಜನವರಿ ೬ ರಂದು ಮದುವೆಯಾಗಿದ್ದು,
ಮದುವೆ ವಿಚಾರದಲ್ಲಿ ಸ್ವರಾ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದರು. ಕೆಲವು ದಿನಗಳ ಹಿಂದೆ, ಸ್ವರಾ ಭಾಸ್ಕರ್ ಅವರು ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಇದೀಗ ಹೆಣ್ಣುಮಗುವಿನ ಪೋಷಕರಾಗಿದ್ದಾರೆ. ಈ ಖುಷಿಯ ವಿಷಯವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸ್ವರಾ ಮತ್ತು ಫಹಾದ್ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಾಮಾಜಿಕ ಪ್ರಜ್ಞೆಯುಳ್ಳ ಬಾಲಿವುಡ್ ನ ಕೆಲವೇ ಕೆಲವು ನಟಿಯರಲ್ಲಿ ಸ್ವರಾ ಭಾಸ್ಕರ್ ಕೂಡ ಒಬ್ಬರು. ಸ್ವರಾ ಆಗಾಗ್ಗೆ ದೇಶದ ವಿವಿಧ ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸ್ವರಾ ಕೂಡ ಸರ್ಕಾರದ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿಯೇ ಸ್ವರಾ ಫಹಾದ್ ಅವರನ್ನು ಭೇಟಿಯಾದರು. ಈ ಭೇಟಿ ಪ್ರೀತಿಗೆ ತಿರುಗಿತ್ತು.ಸಮಾಜವಾದಿ ಪಕ್ಷದ ಯುವ ಘಟಕ ಸಮಾಜವಾದಿ ಯುವಜನ ಸಭಾದ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ಫಹಾದ್ ಅಹ್ಮದ್ ಮತ್ತು ಸ್ವರಾ ಮಾರ್ಚ್‌ನಲ್ಲಿ ವಿವಾಹವಾದರು.