ಮಗುವಿನ ಗಂಟಲಲ್ಲಿ ಸಿಲುಕಿದ ಟೂತ್ ಬ್ರಶ್: ಯಶಸ್ವಿ ಶಸ್ತ್ರಚಿಕಿತ್ಸೆ


ಪುದುಚೇರಿ,ಜೂ.೧೧- ಪ್ರತಿಯೊಬ್ಬರಿಗೂ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸ ಇರುತ್ತದೆ.ಈ ಹಲ್ಲುಜ್ಜುವ ಬ್ರಷ್ ಮಗುವಿನ ಜೀವಕ್ಕೆ ಅಪಾಯ ತಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿ ಮಗುವೊಂದು ಹಲ್ಲುಜ್ಜುತ್ತಿತ್ತು. ಅವನ ಜೊತೆ ಅವನ ಕಿರಿಯ ಸಹೋದರನೂ ಇದ್ದ. ಇಬ್ಬರೂ ತಮಾಷೆಯಾಗಿ ಹಲ್ಲುಜ್ಜುತ್ತಿದ್ದರು. ಅಷ್ಟರಲ್ಲಿ ಕಿರಿಯ ಸಹೋದರ ಹಿಂಬದಿಯಿಂದ ಹಿರಿಯನಿಗೆ ಕಪಾಳಮೋಕ್ಷ ಮಾಡಿದ್ದರಿಂದ ಟೂತ್ ಬ್ರಶ್ ಮಗುವಿನ ಕೈಯಿಂದ ಜಾರಿದೆ. ಈ ಟೂತ್ ಬ್ರಶ್ ನೇರವಾಗಿ ಮಗುವಿನ ಗಂಟಲಿಗೆ ಹೋಗಿ ಸಿಲುಕಿಕೊಂಡಿದೆ. ಆದರೆ, ವೈದ್ಯರು ಸಕಾಲದಲ್ಲಿ ಮಗುವಿನ ಪ್ರಾಣ ಉಳಿಸಿದ್ದಾರೆ.
ಮಹಾತ್ಮ ಗಾಂಧಿ ಸ್ನಾತಕೋತ್ತರ ದಂತ ವಿಜ್ಞಾನ ಸಂಸ್ಥೆ (ಎಂಜಿಪಿಜಿಐಡಿಎಸ್) ಯ ಶಸ್ತ್ರಚಿಕಿತ್ಸಕರ ತಂಡವು ಮಗುವಿನ ಗಂಟಲಿನಿಂದ ಹಲ್ಲುಜ್ಜುವ ಬ್ರಷ್ ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಿದೆ. ಬಾಲಕನನ್ನು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕಿಲಿಯಾನೂರ್ ನಿವಾಸಿ ಎಂದು ಗುರುತಿಸಲಾಗಿದೆ.
ಕಿಳಿಯನೂರಿನಲ್ಲಿ ವಾಸವಾಗಿರುವ ರಾಮ್ಶೆ ಅವರ ೧೪ ವರ್ಷದ ಪುತ್ರ ಆರ್. ದಿಬೇಶ್ ಹಲ್ಲುಜ್ಜುತ್ತಿದ್ದ. ಆತನ ಸಹೋದರ ಆತನಿಗೆ ಹಿಂದಿನಿಂದ ಕಪಾಳಮೋಕ್ಷ ಮಾಡಿದ್ದು, ಟೂತ್ ಬ್ರಶ್ ದಿಬೇಶ್ ಕುತ್ತಿಗೆಗೆ ಸಿಕ್ಕಿಕೊಂಡಿದೆ. ಇದರಿಂದಾಗಿ ಕಿರಿಯ ಸಹೋದರ ಭಯದಿಂದ ಕಿರುಚಲು ಪ್ರಾರಂಭಿಸಿದ್ದಾನೆ. ಗಾಬರಿಯಿಂದ ಕುಟುಂಬಸ್ಥರು ಅಲ್ಲಿಗೆ ಧಾವಿಸಿದ್ದಾರೆ .ಕಿರಿಯ ಮಗ ಘಟನೆಯನ್ನು ವಿವರಿಸಿದ್ದಾನೆ. ಕುಟುಂಬಸ್ಥರು ದಿಬೇಶನನ್ನು ಕೂಡಲೇ ವೈದ್ಯರ ಬಳಿ ಕರೆದೊಯ್ದಿದ್ದಾರೆ.
ಡಾ.ಬಾಬು ಅವರು ಹೇಳಿಕೆಯಂತೆ ಟೂತ್ ಬ್ರಷ್‌ನ ಮುಂಭಾಗದ ಭಾಗವು ಬಾಲಕನ ಗಂಟಲಿಗೆ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದೆ. ಬಾಯಿ ತೆರೆದಾಗ ಬ್ರಶ್ ಕಾಣಿಸಿದರೂ ತೆಗೆಯುವ ಸ್ಥಿತಿಯಲ್ಲಿ ಇರಲಿಲ್ಲ. ಮಗು ನೋವು ಅನುಭವಿಸುತ್ತಿದ್ದ, ಉಸಿರಾಡಲು ಸಹ ಸಾಧ್ಯವಾಗಲಿಲ್ಲ. ತಕ್ಷಣವೇ ಶಸ್ತ್ರಕ್ರಿಯೆ ನಡೆಸಿ ಟೂತ್ ಬ್ರಶ್ ಯಾವುದೇ ಹಾನಿಯಾಗದಂತೆ ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಬಾಲಕ ಚೇತರಿಸಿಕೊಂಡಿದ್ದಾನೆ. ಸಂಜೆಯವರೆಗೂ ತೀವ್ರ ನಿಗಾದಲ್ಲಿಟ್ಟು ಅದೇ ದಿನ ಡಿಸ್ಚಾರ್ಜ್ ಮಾಡಲಾಗಿದೆ.