ಮಗುವಿಗೊಂದು ಗಿಡ ಕೊಟ್ಟು ಬೆಳೆಸಿ

ಕೋಲಾರ,ಜೂ,೭:ಶಾಲೆಯಲ್ಲಿ ಮಗುವಿಗೊಂದು ಗಿಡ ಕೊಟ್ಟು ಅವರಿಂದಲೇ ನಾಟಿ ಮಾಡಿಸಿ ಬೆಳೆಸುವ ಮೂಲಕ ಮಕ್ಕಳಲ್ಲಿ ಪರಿಸರ,ಗಿಡಮರಗಳು,ಜೀವ ಸಂಕುಲದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕ ಮನೋಹರ್ ಕಿವಿಮಾತು ಹೇಳಿದರು.
ತಾಲ್ಲೂಕಿನ ಚೆಲುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಗುವಿಗೆ ಒಂದೊಂದು ಗಿಡ ಕೊಟ್ಟು ಬೆಳೆಸುವಂತೆ ತಿಳಿಸಿದರೆ ಆ ಮಗು ಗಿಡ ನನ್ನದು ಎಂದು ಬೆಳೆಸುವ ಕಾರ್ಯ ಮಾಡುತ್ತದೆ, ಶಾಲೆ ಬಿಟ್ಟ ನಂತರವೂ ಶಾಲೆಯ ಆವರಣದಲ್ಲಿ ನಾನು ಬೆಳೆಸಿದ ಗಿಡ ಮರವಾಗಿದೆ ಎಂಬ ಹೆಮ್ಮೆ ಎಂದೆಂದಿಗೂ ನಿಮ್ಮದಾಗುತ್ತದೆ ಎಂದರು.
ಅರಣ್ಯ ಇಲಾಖೆ ನರ್ಸರಿಗಳಲ್ಲಿ ಗಿಡಗಳನ್ನು ಬೆಳೆಸಿ ರೈತರಿಗೆ, ಶಾಲೆಗಳಿಗೆ ಒದಗಿಸುತ್ತಿದೆ, ಇದರ ಪ್ರಯೋಜನ ಪಡೆದುಕೊಳ್ಳಬೇಕು, ನಮ್ಮ ಪರಿಸರ ಉಳಿಸುವ ಅರಣ್ಯ ಇಲಾಖೆಯ ಪ್ರಯತ್ನಕ್ಕೆ ಶಾಲಾ ಮಕ್ಕಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಅರಣ್ಯ ವೀಕ್ಷಕ ಶೇಖರ್ ಮಾತನಾಡಿ, ಮುಂದೆ ಜೀವ ಸಂಕುಲ ಉಳಿಯಬೇಕಾದರೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಗಾಳಿ ಸಿಗಲು ನಾವೆಲ್ಲರೂ ಮರ ಬೆಳೆಸಬೇಕು, ಮರ ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು, ಗಿಡಮರಗಳನ್ನು ಪ್ರೀತಿಯಿಂದ ಬೆಳೆಸಿ ಪೋಷಿಸಬೇಕು ಎಂದು ತಿಳಿಸಿದರು
ಶಾಲೆಯ ಮುಖ್ಯಶಿಕ್ಷಕಿ ನೂರ್ ಆಯಿಷಾ ರವರು ಮಾತನಾಡಿ, ಆರೋಗ್ಯಕ್ಕಾಗಿ ಗಿಡ ಮರ ಬೆಳಿಸಿ ಪರಿಸರ ರಕ್ಷಿಸಲು ಕೈಜೋಡಿಸೋಣ, ಒಂದು ದೊಡ್ಡ ಮರ ಬಿಡುಗಡೆ ಮಾಡುವ ಆಮ್ಲಜನಕವನ್ನು ನಾವು ಕೈಗಾರಿಕೆಗಳಲ್ಲಿ ತಯಾರಿಸಲು ಲಕ್ಷಾಂತರ ರೂ ಖರ್ಚಾಗುತ್ತದೆ, ಮರಗಳು ನಮಗೆ ಉತ್ತಮ ಗಾಳಿ ನೀಡುವ ಆರೋಗ್ಯ ನೀಡಿವೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್,ಶಿಕ್ಷಕರಾದ ಸಿ.ಅಶ್ವಥ್ಥ್, ಪದ್ಮಾವತಿ ಮತ್ತಿತರರು ಹಾಜರಿದ್ದರು.