ಮಗುವಿಗೆ ಮನೆಯಿಂದಲೇ ಮೊದಲ ಸಂಸ್ಕಾರ ಸಿಗಲಿ: ಅಮರಯ್ಯ ಸ್ವಾಮಿ ಜಾಲಿಬೆಂಚಿ

ಸಂಜೆವಾಣಿ ವಾರ್ತೆ
ಕೆಂಭಾವಿ:ಡಿ.23:ಮನೆಯೆ ಮೊದಲ ಪಾಠಶಾಲೆ ಜನನಿ ತಾನೇ ಮೊದಲು ದೇವರು ಎಂಬ ಮಾತಿನಂತೆ
ಪ್ರತಿಯೊಂದು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆ ಮತ್ತು ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಸಾಹಿತಿ ಅಮರಯ್ಯಸ್ವಾಮಿ ಜಾಲಿಬೆಂಚಿ ಹೇಳಿದರು.
ಪಟ್ಟಣದ ನಂದಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ಪಂದನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಾತೃ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಗುವಿಗೆ ತಾಯಿಯೆ ಮೊದಲ ಗುರು. ಮನೆಯಿಂದಲೆ ಮಗು ಸಂಸ್ಕøತಿ ಮತ್ತು ಸಂಸ್ಕಾರ ಕಲಿಯುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹು ಮುಖ್ಯವಾದದ್ದು.
ಪ್ರತಿಯೊಂದು ಮಗು ಬೆಳೆಯುತ್ತಲೇ ಮನೆಯಲ್ಲಿನ ಸಂಸ್ಕಾರವನ್ನು ಅನುಕರಣೆ ಮಾಡುತ್ತಾ ಬೆಳೆಯುತ್ತದೆ ಆದ್ದರಿಂದ ಪ್ರತಿಯೊಬ್ಬ ಪಾಲಕರೂ ಮನೆಯಲ್ಲಿ ಉತ್ತಮ ಸಂಸ್ಕಾರ ಪಾಲಿಸಬೇಕು. ಇಂದಿನ ದಿನಮಾನಗಳಲ್ಲಿ ಮೊಬೈಲ್ ಹಾಗೂ ಟಿವಿ ಬಳಕೆ ಹೆಚ್ಚಾಗಿದ್ದು ಇದರಿಂದ ವಿದ್ಯಾರ್ಥಿಗಳು ತಪ್ಪು ದಾರಿ ತುಳಿಯುತ್ತಿದ್ದಾರೆ. ಈ ಬಗ್ಗೆ ಕಾಳಜಿ ವಹಿಸುವುದು ಅವಶ್ಯವಾಗಿದೆ ಎಂದ ಅವರು ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವ ವಾತವರಣ ಸೃಷ್ಠಿಸಬೇಕು ಎಂದು ಹೇಳಿದರು.
ಡಾ. ಮೀರಾ ಪವನ ಕುಲಕರ್ಣಿ ಮಾತನಾಡಿ, ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ಮನೆಯಿಂದಲೇ ನಡೆಯಬೇಕು. ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಅದಕ್ಕೆ ಶಿಕ್ಷಕರನ್ನು ದೂರುವ ಬದಲು ನಮ್ಮ ಮಕ್ಕಳಲ್ಲಿ ಓದುವ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಹುರಿದುಂಬಿಸಬೇಕು. ಪ್ರತಿ ವರ್ಷ ಸ್ಪಂದನ ಶಾಲೆಯಲ್ಲಿ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಮಾತೃ ಮಿಲನ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳ ತಾಯಂದಿರನ್ನು ಶಾಲೆಗೆ ಕರೆಯಿಸಿ ಅವರಿಂದ ಮಕ್ಕಳಿಗೆ ಕೈ ತುತ್ತು ನೀಡುವದು ನಂತರ ತಾಯಂದಿರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದು ದಿನ ತಾಯಂದಿರು ಎಲ್ಲ ಮರೆತು ಮಕ್ಕಳಾಗಿ ಆಟದಲ್ಲಿ ಭಾಗವಹಿಸಿ ಖುಷಿಪಡುತ್ತಾರೆ ಎಂದು ಹೇಳಿದರು.
ನಂದಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪಿಕೆಪಿಎಸ್-2 ಅಧ್ಯಕ್ಷ ಮಡಿವಾಳಪ್ಪಗೌಡ ಪೆÇಲೀಸ ಪಾಟೀಲ, ಸಂಸ್ಥೆಯ ಅಧ್ಯಕ್ಷ ವಿಕಾಸ ಸೊನ್ನದ, ಡಾ. ಕಿರಣ ಜಕರಡ್ಡಿ, ಡಾ. ಪ್ರವೀಣ ಪಾಟೀಲ, ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ, ಡಾ.ಶಿವನಗೌಡ ಪಾಟೀಲ, ಬಾಬುಪಟೇಲ ಯಲಗೋಡ ಸೇರಿದಂತೆ ವಿದ್ಯಾರ್ಥಿಗಳ ತಾಯಂದಿರು ಭಾಗವಹಿಸಿದ್ದರು.
ಶಿಕ್ಷಕಿ ರೋಹಿಣಿ ಗುಬ್ಯಾಡ ನಿರೂಪಿಸಿದರು, ಪ್ರಿಯಾಂಕಾ ರಾಠೋಡ ಸ್ವಾಗತಿಸಿದರು, ರೇವಣಸಿದ್ದಯ್ಯ ಮಠ ವಂದಿಸಿದರು.

ವರ್ಷದ 365 ದಿನವೂ ಸಮಯದ ಪರಿವೆ ಇಲ್ಲದೆ ಕೆಲಸ ನಿರ್ವಹಿಸುವ ತಾಯಂದಿರುಗೆ ಒಂದು ದಿನವಾದರೂ ಎಲ್ಲವನ್ನು ಮರೆತು ತಾವು ಮಗುವಾಗಿ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲಿ ಹಾಗೂ ಮಕ್ಕಳೊಂದಿಗೆ ಭೋಜನ ಸವಿಯಲಿ ಎಂಬ ಉದ್ದೇಶದಿಂದ ಮಾತೃ ಮಿಲನ ಕಾರ್ಯಕ್ರಮವನ್ನು ಪ್ರತಿವರ್ಷ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ.
ಡಿ.ಸಿ.ಪಾಟೀಲ, ಸಂಸ್ಥೆಯ ಕಾರ್ಯದರ್ಶಿಗಳು