ಕಲಬುರಗಿ,ಜೂ.4-ಮಗಳ ಮದುವೆಗೆಂದು ಮನೆಯಲ್ಲಿಟ್ಟಿದ್ದ 2.44 ಲಕ್ಷ ರೂ.ಮೌಲ್ಯದ ನಗ-ನಾಣ್ಯವನ್ನು ಕಳ್ಳರು ಕದ್ದೊಯ್ದ ಘಟನೆ ನಗರದ ಉಮಾರ ಕಾಲೋನಿಯಲ್ಲಿ ನಡೆದಿದೆ.
ಈ ಸಂಬಂಧ ಸೈಯದ್ ಜಹೀರವುದ್ದಿಲ್ ಎಂಬುವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸೈಯದ್ ಜಹೀರವುದ್ದಿಲ್ ಅವರು ಪತ್ನಿ, ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿಕೊಂಡು ಮುಂಬೈಗೆ ಹೋಗಿದ್ದರು. ಈ ವೇಳೆ ಮನೆ ಕಳ್ಳತನವಾಗಿದೆ. ಅವರು ಮರಳಿ ಬಂದಾಗ ಮನೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಮನೆಯ ಅಲಮಾರಿಯಲ್ಲಿ ಮಗಳ ಮದುವೆಗೆಂದು ತೆಗೆದಿಟ್ಟಿದ್ದ 1.50 ಲಕ್ಷ ರೂ.ನಗದು, 60 ಸಾವಿರ ರೂ.ಮೌಲ್ಯದ 20 ಗ್ರಾಂ.ಬಂಗಾರದ ಬಿಸ್ಕೆಟ್, 30 ಸಾವಿರ ರೂ.ಮೌಲ್ಯದ ಚೈನ್, 4 ಸಾವಿರ ರೂ.ಮೌಲ್ಯದ 2 ಉಂಗುರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.