ಮಗಳ ಬಳಸಿ ಡಿಕೆಶಿ ಹೊಲಸು ರಾಜಕಾರಣ ಸಿಡಿ ಯುವತಿ ಪೋಷಕರ ಆರೋಪ

ಬೆಂಗಳೂರು,ಮಾ.27- ಹೊಲಸು ರಾಜಕಾರಣಕ್ಕೆ ನಮ್ಮ ಮಗಳನ್ನು ಬಳಸಿಕೊಂಡಿದ್ದಾರೆ. ನಮ್ಮ ಮಗಳಿಗೆ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದೇ ಡಿ.ಕೆ.ಶಿವಕುಮಾರ್ ಎಂದು ಸಿಡಿ ಯುವತಿಯ ತಂದೆ ಆರೋಪಿಸಿದ್ದಾರೆ.
ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್ ಐಟಿ)ದ ವಿಚಾರಣೆ ಮುಗಿಸಿ ಹೊರಬಂದ ಬಳಿಕ ಯುವತಿ ತಂದೆ ಮಾತನಾಡಿ, ಸಿಡಿ ಪ್ರಕರಣದಲ್ಲಿ ಹೆಣ್ಣು‌‌ ಮಗಳನ್ನು ಇಟ್ಟುಕೊಂಡು ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಮೇಲೆ ಯಾವುದೇ ರಾಜಕೀಯ ಪ್ರಭಾವವಿಲ್ಲ ಎಂದರು.
ಮಗಳು ನನ್ನ ಜೊತೆ ಫೋನ್​ನಲ್ಲಿ ಮಾತನಾಡುವಾಗ ಡಿ.ಕೆ.ಶಿವಕುಮಾರ್ ಮನೆಗೆ ಹೋಗ್ತಾ ಇದ್ದೇನೆ ಅಂದಿದ್ದಳು. ಅವರೇ ನನ್ನ ಮಗಳಿಗೆ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದಾರೆ. ನಮ್ಮ ಮಗಳನ್ನು ಕಳುಹಿಸಿ ಕೊಡಿ. ನಾನೊಬ್ಬ ಮಾಜಿ ಸೈನಿಕ. ‌‌ನನ್ನ ಮಗಳನ್ನು ರಕ್ಷಣೆ ಮಾಡುವುದು ನನಗೆ ಗೊತ್ತಿದೆ‌‌. ನನ್ನ ಮಗಳಿಗೆ ಏನೇ ತೊಂದರೆಯಾದರೂ ಡಿಕೆಶಿ ಹೊಣೆ ಎಂದು ದೂರಿದರು.  
ನಮಗೆ ಪೊಲೀಸ್ ಇಲಾಖೆ ಸಾಥ್ ನೀಡಿದೆ‌‌. ಅದೇ ತರಹ ನಮಗೆ ಮಾಧ್ಯಮದವರು ಸಾಥ್ ಕೊಡಬೇಕಿದೆ. ದಯವಿಟ್ಟು ಮನೆಗೆ ಬಾ ಎಂದು ತಮ್ಮ ಮಗಳಿಗೆ ಮನವಿ ಮಾಡಿದ್ದಾರೆ‌.
ಯುವತಿ ಸಹೋದರ ಮಾತನಾಡಿ, ನಮ್ಮ ಬಳಿಯಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು‌ ತನಿಖಾಧಿಕಾರಿಗಳಿಗೆ ನೀಡಿದ್ದೇವೆ. ಸಿಡಿ ಪ್ರಕರಣ ಹೊರಬಂದ ಬಳಿಕ ಮಾ.2ರಂದು ನಮ್ಮ ಜೊತೆ ಮಾತನಾಡಿದ್ದು, ಬಿಟ್ಟರೆ ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಅಕ್ಕನಿಗೆ ರಕ್ಷಣೆ ಕೊಡುವ ವಿಚಾರದಲ್ಲಿ ನರೇಶ್ ಗೌಡ ಹೇಳಿಕೆ ಶುದ್ಧ ಸುಳ್ಳು. ಅವನು ಯಾರು ನಮ್ಮ ಅಕ್ಕನಿಗೆ ರಕ್ಷಣೆ ಕೊಡೊಕೆ‌? ನಮ್ಮ ತಂದೆ ಮಾಜಿ ಸೈನಿಕ. ದೇಶ ಕಾದವರಿಗೆ ಮಗಳಿಗೆ ರಕ್ಷಣೆ ಕೊಡುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸುದ್ದಿಯಾದ ಬಳಿಕ ಇದೇ ಮೊದಲ ಬಾರಿಗೆ ಯುವತಿಯ ಪೋಷಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.