ಮಗಳಿಗೆ ತಂದೆಯ ಸೆಲ್ಯೂಟ್

ತಿರುಪತಿ, ಜ.೫-ತಂದೆಗಿಂತಲೂ ಉನ್ನತ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡು ಕರ್ತವ್ಯದಲ್ಲಿರುವಾಗಲೇ ಮುಖಾಮುಖಿಯಾಗಿ ಮಗಳಿಗೆ ತಂದೆ ಪ್ರೀತಿ ಮತ್ತು ಗೌರವದಿಂದ ಸೆಲ್ಯೂಟ್ ಮಾಡಿದ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರ ಪ್ರದೇಶದ ತಿರುಪತಿಯಲ್ಲಿ ಘಟನೆ ನಡೆದಿದೆ. ಈ ವೇಳೆ ಅಲ್ಲೇ ಸಮೀಪದಲ್ಲಿದ್ದ ಪೊಲೀಸರಿಗೆ ಮತ್ತು ಸಾಮಾನ್ಯ ಜನರಿಗೆ ಅದೊಂದು ಅತ್ಯುತ್ತಮ ಕ್ಷಣವಾಗಿ ಮಾರ್ಪಟ್ಟಿತು ಎಂದು ವರದಿಯಾಗಿದೆ.
ತಂದೆ ವೈ. ಶ್ಯಾಮಸುಂದರ್ ಸರ್ಕಲ್ ಇನ್ ಸ್ಪೆಕ್ಟರ್ ಆಗಿದ್ದರೆ, ಪುತ್ರಿ ಯೆಂಡ್ಲೂರು ಜೆಸ್ಸಿ ಪ್ರಸಾಂತಿ ಗುಂಟೂರಿನ ಡಿಎಸ್ಪಿಯಾಗಿ ಇತ್ತೀಚೆಗಷ್ಟೇ ನೇಮಕವಾಗಿದ್ದರು. ಇದುವರೆಗೆ ಕರ್ತವ್ಯದ ಸಮಯದಲ್ಲಿ ಮುಖಾಮುಖಿಯಾಗಿರಲಿಲ್ಲ.
ಆದರೆ, ಮೊನ್ನೆ ತಿರುಪತಿಯಲ್ಲಿ ನಡೆಯುತ್ತಿರುವ ಆಂಧ್ರಪ್ರದೇಶ ರಾಜ್ಯ ಪೊಲೀಸ್ ಕರ್ತವ್ಯ ಸಭೆಯಲ್ಲಿ ಭಾಗವಹಿಸುವ ವೇಳೆ ಪರಸ್ಪರ ಮುಖಾಮುಖಿಯಾಗಿದ್ದರು. ಈ ವೇಳೆ ತನಗಿಂತ ಉನ್ನತ ಅಧಿಕಾರಿ ಎಂಬ ನಿಟ್ಟಿನಲ್ಲಿ ತಂದೆ ಶ್ಯಾಮ್ ಸುಂದರ್ ಮಗಳಿಗೆ ಸೆಲ್ಯೂಟ್ ಮಾಡಿದ್ದಾರೆ.
ಇನ್ನು, ಈ ಕುರಿತು ಪ್ರತಿಕ್ರಿಯಿಸಿರುವ ಡಿಎಸ್ಪಿ ಪ್ರಸಾಂತಿ, ತಂದೆಯಿಂದ ಸೆಲ್ಯೂಟ್ ಮಾಡಿಸಿಕೊಳ್ಳಬೇಕು ಎಂಬ ಇಚ್ಛೆ ನನಗೆ ಇರಲೇ ಇಲ್ಲ. ಇದೇ ಪ್ರಥಮ ಬಾರಿಗೆ ನಾವು ಕರ್ತವ್ಯದಲ್ಲಿರುವಾಗ ಮುಖಾಮುಖಿಯಾದೆವು. ಅವರು ನನ್ನ ತಂದೆ, ಅವರು ಸೆಲ್ಯೂಟ್ ಮಾಡುವುದು ನನಗೆ ಇಷ್ಟವಿರಲಿಲ್ಲ. ಆದರೆ ಇದು ನಡೆದು ಹೋಯಿತು. ನಾನೂ ತಂದೆಗೆ ಸೆಲ್ಯೂಟ್ ಮರಳಿ ನೀಡಿದೆ ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.
ನನ್ನ ತಂದೆಯೇ ನನಗೆ ಸ್ಫೂರ್ತಿ. ಅವರನ್ನು ನೋಡುತ್ತಲೇ ನಾನು ಪೊಲೀಸ್ ಆಗಬೇಕೆಂಬ ಮಹದಾಸೆಯೊಂದಿಗೆ ಬೆಳೆದು ಬಂದೆ. ಈ ದಿನವು ನಿಜಕ್ಕೂ ನನಗೆ ಅವಿಸ್ಮರಣೀಯ ದಿನ ಎಂದು ಪ್ರಸಾಂತಿ ನುಡಿದಿದ್ದಾರೆ.