ಮಕ್ಕಳ ಹಕ್ಕು ಹಾಗೂ ರಕ್ಷಣೆ ಕುರಿತು ಶಾಲಾ ಮಟ್ಟದಲ್ಲಿಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ

ಕಲಬುರಗಿ,ಜು.25:ಬೆಂಗಳೂರಿನ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಅಪರ್ಣಾ ಎಮ್.ಕೊಳ್ಳಾ ಅವರು ಶುಕ್ರವಾರ (ಜುಲೈ 21 ರಂದು) ಆಳಂದ ತಹಶೀಲ್ದಾರರ ಕಚೇರಿಯಲ್ಲಿ ಪೋಕ್ಸೋ ಪ್ರಕರಣದ ಕುರಿತು ತಾಲ್ಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಆಳಂದ ತಾಲ್ಲೂಕಿನಲ್ಲಿ ಪೋಕ್ಸೋ ಪ್ರಕರಣದ ಕುರಿತು ಮಾಹಿತಿಯನ್ನು ಪಡೆದು, ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಷ, ಬಾಲ್ಯವಿವಾಹ, ಬಾಲಕಾರ್ಮಿಕ ಮತ್ತಿತರ ವಿಷಯಗಳ ಕುರಿತು ಶಾಲಾ ಮಟ್ಟದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮಕ್ಕಳ ರಕ್ಷಣೆಯ ಕುರಿತು ಆದ್ಯತೆ ವಹಿಸಬೇಕು ಎಂದರು.
ಸಭೆಯಲ್ಲಿ ತಹಶೀಲ್ದಾರರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಮಾಡುವ ಕುರಿತು ಎಲ್ಲಾ ಅಧಿಕಾರಿಗಳು ಪ್ರಮಾಣ ವಚನವನ್ನು ಬೋಧಿಸಲಾಯಿತು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಅಪರ್ಣಾ ಎಮ್.ಕೊಳ್ಳಾ ಅವರು ಜುಲೈ 22 ರಂದು ಜಿಲ್ಲಾ ಆಸ್ಪತ್ರೆಯ ಎನ್.ಐ.ಸಿ.ಗೆ ಹಾಗೂ ಸರ್ಕಾರಿ ವೀಕ್ಷಣಾಲಯ ಕಲಬುರಗಿ ಸಂಸ್ಥೆಗೆ ಭೇಟಿ ನೀಡಿದರು. ಜುಲೈ 24 ರಂದು ಸಖಿ ಒನ್ ಸ್ಟಾಪ್ ಸೆಂಟರಗೆ ಭೇಟಿ ನೀಡಿದರು.
ಆಯೋಗ ಸದಸ್ಯೆ ಅಪರ್ಣಾ ಎಮ್.ಕೊಳ್ಳಾ ಅವರು ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಹಾಗೂ ಪ್ರಕರಣಗಳು ಯಾವ ಹಂತದಲ್ಲಿವೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದರು. ಇಂತಹ ಘಟನೆಗಳು ಆಗದಂತೆ ಶಾಲಾ ಮಟ್ಟದಲ್ಲಿ, ಪದವಿ ಪೂರ್ವ ಕಾಲೇಜು ಮಟ್ಟದಲ್ಲಿ ಮಕ್ಕಳಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.