ಮಕ್ಕಳ ಹಕ್ಕುಗಳ ರಕ್ಷಣೆ ರಾಷ್ಟ್ರದ ಅಭಿವೃದ್ಧಿಗೆ ಪೂರಕ

ಕಲಬುರಗಿ:ನ.14: ಮಕ್ಕಳು ಶಿಕ್ಷಣ ಪಡೆಯುವ, ಭಾವನೆ ವ್ಯಕ್ತಪಡಿಸುವ, ಮಾಹಿತಿ ಪಡೆಯುವ, ಪೌಷ್ಠಿಕ ಆಹಾರವನ್ನು ಪಡೆಯುವ, ಆರೋಗ್ಯ, ಶೋಷಣೆಯನ್ನು ವಿರೋಧಿಸುವ, ಸ್ವ-ರಕ್ಷಣೆ, ಆಟೋಟ್, ಒಳ್ಳೆಯ ಹವ್ಯಾಸಗಳು, ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸುವ, ರಾಷ್ಟ್ರೀಯತೆ ಹಕ್ಕು, ಬದಕುಳಿಯುವಂತಹ ಮುಂತಾದ ಹಕ್ಕುಗಳು ಮಕ್ಕಳಿಗೆ ದೊನರೆಯಬೇಕು. ಇದರಿಂದ ಮಕ್ಕಳು ಮುಂದೆ ಉತ್ತಮ ನಾಗರಿಕರಾಗಿ ದೇಶಕ್ಕೆ ಕೊಡುಗೆ ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಲು ಸಾಧ್ಯವಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಅವರು ಗರದ ಖಾದ್ರ ಚೌಕ್‍ನಲ್ಲಿರುವ ‘ಕೊಹನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಮಕ್ಕಳ ದಿನಾಚರಣೆ’ಯ ಪ್ರಯುಕ್ತ ಪ್ರತಿಭಾವಂತ ಮಕ್ಕಳಿಗೆ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೆಹರು ಅವರು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು, ಸ್ವಾತಂತ್ರ್ಯ ನಂತರ ದೇಶದ ಪ್ರಥಮ ಪ್ರಧಾನಿಯಾಗಿ ಭಾರತ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ನೀತಿಗಳನ್ನು ರಚಿಸಿ ಆಧುನಿಕ ಭಾರತದ ನಿರ್ಮಾತೃರಾಗಿದ್ದಾರೆ. ಮಕ್ಕಳ ಮೇಲಿರುವ ಅಪಾರವಾದ ಪ್ರೀತಿಯಿಂದ ನೆಹರು ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆಯೆಂದರು.
ಸಂಸ್ಥೆಯ ಅಧ್ಯಕ್ಷ ಸತೀಶ ಟಿ.ಸಣಮನಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಗರಿಕರಾಗಿರುವದರಿಂದ, ಮಕ್ಕಳಿಗಾಗಿ ಆಸ್ತಿ ಮಾಡದೆ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮವಾದ ಜ್ಞಾನ, ನೈತಿಕ ಮೌಲ್ಯಗಳು ನೀಡಿ ರಾಷ್ಟ್ರದ ಸತ್ಪ್ರಜೆಯನ್ನಾಗಿ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ವಿಠಲ ಕುಂಬಾರ, ಎಸ್.ಎಸ್.ಪಾಟೀಲ ಬಡದಾಳ, ಅಮರ ಜಿ.ಬಂಗರಗಿ ಸೇರಿದಂತೆ ಹಲವರು, ಮಕ್ಕಳು ಪಾಲ್ಗೊಂಡಿದ್ದರು.