ಮಕ್ಕಳ ಹಕ್ಕುಗಳ ರಕ್ಷಣೆ ಜೊತೆಗೆ ಶಿಕ್ಷಣ ನೀಡಲು ಕರೆ


ಸಂಜೆವಾಣಿ ವಾರ್ತೆ
ಸಂಡೂರಿನ :ಜು: 18: ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಅವರ ಹಕ್ಕುಗಳನ್ನು ರಕ್ಷಿಸುವಂತಹ ಮಹತ್ತರ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ದೇವರಡ್ಡಿ ತಿಳಿಸಿದರು.
ಅವರು ಪಟ್ಟಣದ ಗುರುಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಂಡೂರಿನ ಸರ್ಕಾರಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನ್ಯಾಯದ ದಿನ ಹಾಗೂ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದು ಬಹಳಷ್ಟು ಸಂದರ್ಭದಲ್ಲಿ ನಾವು ಬಾಲ್ಯದಲ್ಲಿ ಅವರಿಗೆ ಉತ್ತಮ ಕಲಿಕೆಯನ್ನು ನೀಡದೇ ಇರುವುದು ಅಪರಾಧವಾಗುತ್ತದೆ, ಅದ್ದರಿಂದ ಕಡ್ಡಾಯವಾಗಿ ಶಿಕ್ಷಣ ಮತ್ತು ಮೂಲಭೂತ ಅಂಶಗಳನ್ನು ಒದಗಿಸಿ ಹಕ್ಕುಗಳನ್ನು ರಕ್ಷಿಸೋಣ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯದಿನ ಮತ್ತು ಮಕ್ಕಳ ಹಕ್ಕುಗಳ ಕುರಿತು ವಕೀಲರಾದ ಜಿ.ಕೆ. ರೇಖಾ ಅವರು ಮಾತನಾಡಿ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದೆ, ಅಲ್ಲದೆ ಕಡ್ಡಾಯ ಶಿಕ್ಷಣ ಯೋಜನೆಯನ್ನು ಅನುಷ್ಠಾನಮಾಡುವ ಮೂಲಕ ಪ್ರತಿಯೊಂದು ಮಗುವೂ ಸಹ ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಮಹತ್ತರ ಅಂಶವನ್ನು ಅಡಗಿದೆ, ಅಲ್ಲದೆ ಯಾರಾದರೂ ಮಕ್ಕಳಿಗೆ ಶಿಕ್ಷಣವನ್ನು ಕೊಡದೆ ಅವರನ್ನು ಕಾರ್ಮಿಕರನ್ನಾಗಿ ಮಾಡುವುದು ಅಪರಾಧ ಅದ್ದರಿಂದ ಪ್ರತಿಯೊಬ್ಬರೂ ಸಹ ಶಿಕ್ಷಣ ಕೊಡಬೇಕು ಅದಕ್ಕಾಗಿ ಸಂವಿಧಾನದಲ್ಲಿ ಮಕ್ಕಳಿಗೆ ವಿಶೇಷ ಹಕ್ಕುಗಳನ್ನು ಸಹ ನೀಡಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಬಿ.ವಿಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್ ಅಕ್ಕಿ, ವಿವಿಧ ಇಲಾಖೆಯ ಅಧಿಕಾರಿಗಳು, ಸರ್ಕಾರಿ ಅಭಿಯೋಜಕರಾದ ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಕುಮಾರಸ್ವಾಮಿ, ಕಾರ್ಯದರ್ಶಿ ಎನ್.ಎಂ. ನಟರಾಜ್, ಮಂಜುನಾಥಗೌಡ ಅತಿಥಿಗಳಾಗಿ ಅಗಮಿಸಿದ್ದರು, ವಕೀಲರಾದ ಬಿ.ಎಸ್. ಮಂಜುನಾಥ ಪ್ರಾರ್ಥಿಸಿದರು. ಉಜ್ಜಿನಪ್ಪ ಸ್ವಾಗತಿಸಿದರು, ಅಂಜಿನಪ್ಪ ವಕೀಲರು ವಂದಿಸಿದರು, ಇಂಡಿ ಮಹಾರುದ್ರಪ್ಪ ನಿರೂಪಿಸಿದರು, ಕಾರ್ಯಕ್ರಮದಲ್ಲಿ ಎಲ್ಲಾ ವಕೀಲರು, ವಿದ್ಯಾರ್ಥಿಗಳು ಉಪಸ್ತಿತರಿದ್ದರು. 
ಚಿತ್ರ: ಪಟ್ಟಣದ ಗುರುಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಂಡೂರಿನ ಸರ್ಕಾರಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನ್ಯಾಯದ ದಿನ ಹಾಗೂ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು ನ್ಯಾಯಾಧೀಶ ದೇವಾರಡ್ಡಿ ಉದ್ಘಾಟಿಸಿದರು.