ಮಕ್ಕಳ ಹಕ್ಕುಗಳ ರಕ್ಷಣೆಗೆ ಪೋಷಕರು ಸಮಾಜ ಬದ್ದವಾಗಿರಬೇಕು- ಹುಸೇನ್ ಪೀರ್.

ಕೂಡ್ಲಿಗಿ, ಜ.10:- ಬಾಲ್ಯವಿವಾಹದಂತಹ ಪದ್ದತಿಯನ್ನು ಸಮಾಜ ಹಾಗೂ ಪೋಷಕರು ದಿಕ್ಕರಿಸಬೇಕು, ಮಕ್ಕಳಿಗೂ ಹಕ್ಕುಗಳಿವೆ ಎಂದು ತಿಳಿದು ಪೋಷಕರು ಮತ್ತು ಸಮಾಜ ಮಕ್ಕಳ ಅಭಿಪ್ರಾಯಗಳನ್ನು ಗೌರವಿಸಬೇಕಿದೆ, ಮಕ್ಕಳಿಗೆ ವಿನಾಃಕಾರಣ ಕಿರುಕುಳ, ಲೈಂಗಿಕ ದೌರ್ಜನ್ಯ ಮಾಡುತ್ತಿರುವುದು ಅಪರಾಧವಾಗಿದ್ದು ಮಕ್ಕಳು ತಮ್ಮ ಹಕ್ಕುಗಳ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಬೇಕಿದೆ ಇದಕ್ಕೆ ಪೋಷಕರು, ಶಿಕ್ಷಕರು ಸಹಕಾರ ನೀಡಬೇಕಾಗಿದೆ ಎಂದು ಚಿರತಗುಂಡು ಪಿಡಿಓ ಹುಸೇನ್ ಪೀರ್ ತಿಳಿಸಿದರು.
ಅವರು ತಾಲೂಕಿನ ಚಿರತಗುಂಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿರತಗುಂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯ್ತಿವತಿಯಿಂದ ಆಯೋಜಿಸಿದ್ದ ಓದುವ ಬೆಳಕು, ಮಕ್ಕಳ ಸ್ನೇಹಿ ಗ್ರಾಮಪಂಚಾಯ್ತಿ ಅಭಿಯಾನ ಹಾಗೂ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಮಾತನಾಡುತ್ತಿದ್ದರು. ಮಕ್ಕಳಿಗೆ ಶಾಲೆಯಲ್ಲಿ ಸೂಕ್ತ ಶೌಚಾಲಯ, ಪಠ್ಯಪುಸ್ತಕ, ಕುಡಿಯಲು ನೀರಿನ ವ್ಯವಸ್ಥೆ ಮಾಡುವುದು ಶಾಲೆ ಹಾಗೂ ಸ್ಥಳೀಯ ಆಡಳಿತದ ಜವಬ್ದಾರಿಯಾಗಿದ್ದು ಮಕ್ಕಳ ಶ್ರೇಯೋಭಿವೃದ್ದಿಗೆ ಸರ್ಕಾರ ಶ್ರಮಿಸುತ್ತಿದೆ, ಮಕ್ಕಳು ತಮ್ಮ ಹಕ್ಕುಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂದು ಕಿವಿಮಾತು ಹೇಳಿದರು.
ಗ್ರಂಥಪಾಲಕ ಜಿ.ಎಂ.ಕೊಟ್ರೇಶ್ ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿ ಮಕ್ಕಳು ಚಿಕ್ಕವಯಸ್ಸಿನಿಂದಲೇ ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಬೇಕು, ಓದುವಿನಿಂದ ಮಾತ್ರ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುಸ್ತಕಗಳ ಓದಿನಿಂದ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ ಈ ಮೂಲಕ ತಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಮೊಬೈಲ್ ಹವ್ಯಾಸ ಬಿಟ್ಟು ಪುಸ್ತಕ ಓದುವ ಮೂಲಕ ಜ್ಞಾನಿಗಳಾದರೆ ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಯಾವ ಮೂಲೆಯಲ್ಲಿ ಬೇಕಾದರೂ ಜೀವನ ಮಾಡುವ ಆತ್ಮಸ್ಥೈರ್ಯ ಬರುತ್ತದೆ ಎಂದರು.
ಮುಖ್ಯಶಿಕ್ಷಕ ಸಿದ್ದಪ್ಪ ಸ್ವಾಗತಿಸಿದರು. ಶಿಕ್ಷಕ ಹನುಮಂತಪ್ಪ ವಂದಿಸಿದರು. ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ನೂತನ ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯ್ತಿ ಸಿಬ್ಬಂಽ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.