ಮಕ್ಕಳ ಹಕ್ಕುಗಳ ಜಾಗೃತಿ ಜಾಥಾ

ಕೋಲಾರ,ಡಿ.೧: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್ ೨೦೨೧ ರ ಅಂಗವಾಗಿ ಸಾರ್ವಜನಿಕರಲ್ಲಿ ಮಕ್ಕಳ ಮಾರಾಟ ಅಪರಾಧ ಹಾಗೂ ದತ್ತು ಪ್ರಕ್ರಿಯೆ ಕುರಿತು ಹಾಗೂ ಬಾಲ್ಯ ವಿವಾಹ, ಮಕ್ಕಳ ಸಾಗಾಣೆ ಹಾಗೂ ಮಾರಾಟ ನಿಲ್ಲಿಸಿ, ಮಕ್ಕಳ ಹಕ್ಕುಗಳು, ಲೈಂಗಿಕ ದೌರ್ಜನ್ಯ, ಕಾನೂನು ಬಾಹಿರ ದತ್ತು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ ರಥಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಅವರು ಚಾಲನೆ ನೀಡಿದರು.
ದತ್ತು ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆಯಬೇಕು. ಅನಧಿಕೃತ ದತ್ತು ಪ್ರಕ್ರಿಯೆ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ, ಕಾನೂನು ಉಲ್ಲಂಘಿಸಿ ಮಕ್ಕಳನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುವುದು ಹಾಗೂ ಮಾರಾಟ ಮಾಡುವುದಕ್ಕೆ ಕಾನೂನು ಬಾಹಿರ ದತ್ತು ಕ್ರಮ ಎನ್ನುವರು. ಮಗುವನ್ನು ಹಕ್ಕಿನಿಂದ ಪಡೆ ರಾಜನಂತೆ ಮೆರೆ, ಹೆಣ್ಣು ಮಕ್ಕಳನ್ನು ಸಂರಕ್ಷಿಸಿ ಆರೋಗ್ಯ ಪೂರ್ಣ ಸಮಾಜವನ್ನು ಸೃಷ್ಟಿಸಿ, ಮಕ್ಕಳನ್ನು ಮಕ್ಕಳಾಗಿ ಬೆಳೆಯಲು ಅವಕಾಶ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿ, ಮಕ್ಕಳ ಮಾರಾಟ ತಡೆ ನಾವೆಲ್ಲರೂ ಅದರ ಕಡೆ, ಹೆಣ್ಣಿಗೆ ಆಗಲಿ ಹದಿನೆಂಟು ಈಗಲೇ ಏಕೆ ತಾಲಿಯ ನಂಟು, ಮಕ್ಕಳು ದೇಶದ ಸಂಪತ್ತು ಸಾಗಾಣಿಕೆ ಮಾಡಿದರೆ ಬರುವುದು ಆಪತ್ತು ಎಂಬ ಘೋಷಣೆಗಳೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಯುಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಂ.ಜಿ. ಪಾಲಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.