ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಿರಲಿ -ನ್ಯಾ. ದೀಪಾ

ಸಿಂಧನೂರು.ಜು.೧೬- ಮಕ್ಕಳ ಹಕ್ಕುಗಳು ಮಾನವ ಹಕ್ಕುಗಳಾಗಿದ್ದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಮಕ್ಕಳು ತಮ್ಮ ಹಕ್ಕುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ದೀಪಾ ಜಿ ಮನೆರಕರ್ ಮಕ್ಕಳಿಗೆ ಕರೆ ನೀಡಿದರು.
ತಾಲೂಕ ಕಾನೂನು ಸೇವಾ ಸಮಿತಿ, ತಾಲೂಕ ನ್ಯಾಯವಾದಿಗಳ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಮತ್ತು ಚೈತನ್ಯ ಟೆಕ್ನೋ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ ಚೈತನ್ಯ ಟೆಕ್ನೋ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಅಂಗವಾಗಿ ಮಕ್ಕಳ ಹಕ್ಕುಗಳ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಮಕ್ಕಳೇ ನಾಡಿನ ಪ್ರಜೆಗಳಾಗಿದ್ದು ಯಾವುದೇ ಕಾರಣಕ್ಕೂ ಮಕ್ಕಳ ಹಕ್ಕುಗಳು ಉಲ್ಲಂಘನೆ ಯಾಗಬಾರದು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನಿಡುವ ಮೂಲಕ ದೇಶದ ಭಾವಿ ಪ್ರಜೆಗಳನ್ನಾಗಿ ತಯಾರು ಮಾಡಬೇಕು ಎಂದು ಶಿಕ್ಷಕರಿಗೆ ನ್ಯಾಯಾಧೀಶರು ಕಿವಿ ಮಾತು ಹೇಳಿದರು. ಕಾನೂನು ನಿಂತ ನೀರಲ್ಲ. ಕಾಲಕಾಲಕ್ಕೆ ತಕ್ಕಂತೆ ಕಾನೂನುಗಳು ಬದಲಾವಣೆ ಆಗುತ್ತಾ ಇರುತ್ತವೆ. ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ.
ನವಂಬರ್ ೨೯ ರಂದು ಮಕ್ಕಳ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳು ಸದೃಢವಾದಾಗ ಮಾತ್ರ ದೇಶ ಸುಭದ್ರ ಸದೃಢವಾಗಲು ಸಾಧ್ಯ ಎಂದು ನ್ಯಾಯವಾಧಿ ಹೇಮಲತಾ ಜೋಳದರಾಶಿ ಉಪನ್ಯಾಸ ನೀಡಿ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ರಾದ ಕೋಟಪ್ಪ ಕಾಂಬ್ಳೆ, ಒಂದನೆಯ ಅಪರ ಸಿವಿಲ್ ನ್ಯಾಯಾಧೀಶ ರಾದ ಆನಂದಪ್ಪ ಎಂ,ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ, ಸಹಾಯಕ ಸರಕಾರಿ ಅಭಿಯೋಜಕರಾದ ಮಾರುತಿ ಕಲ್ಲೂರು, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ಚೈತನ್ಯ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಟಿ.ಸುಭದ್ರ,ವಕೀಲರಾದ ವೀರಭದ್ರಗೌಡ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ೨೬ ಜನ ಸಿಆರ್‌ಸಿಗಳಿಗೆ ನ್ಯಾಯಾಧೀಶರು ಅಭಿನಂದನಾ ಪ್ರಮಾಣ ಪತ್ರ ನೀಡಿದರು. ಶಿಕ್ಷಕರು, ಮಕ್ಕಳು, ಕಾರ್ಯಕ್ರಮದಲ್ಲಿ ಹಾಜರಿದ್ದರು.