ಮಕ್ಕಳ ಸ್ವಾವಲಂಬಿ ಬದುಕಿಗೆ ಮಕ್ಕಳ ಬ್ಯಾಂಕ್ ಸಹಕಾರಿ: ಬಸವರಾಜ ಬಬಲಾದ

ಇಂಡಿ:ಆ.24: ದುಂದುವೆಚ್ಚ ಮಾಡುವ ಇಂದಿನ ದಿನಮಾನಗಳಲ್ಲಿ ಉಳಿತಾಯ ಪ್ರಜ್ಞೆ ಕಡಿಮೆಯಾಗಿದೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲಿಯೇ ಉಳಿತಾಯ ಮನೋಭಾವನೆ ಬೆಳೆಸುವಲ್ಲಿ ‘ಮಕ್ಕಳ ಬ್ಯಾಂಕ್’ ಮುಖ್ಯವಾಗಿದೆ ಎಂದು ಹಿರೇರೂಗಿ ಪಿಡಿಓ ಬಸವರಾಜ ಬಬಲಾದ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ಬ್ಯಾಂಕ್ ಆರಂಭ ಮತ್ತು ಚಂದ್ರಯಾನ ಕುರಿತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಉತ್ತಮ ಸಂವಹನ, ಹೊಂದಾಣಿಕೆ, ಬದ್ಧತೆ, ಸಮಯಪಾಲನೆ, ನಿರಂತರ ಪ್ರಯತ್ನಶೀಲತೆ, ಪ್ರಚಲಿತ ಜ್ಞಾನದ ಅಳವಡಿಕೆಯಂತಹ ಕೌಶಲಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಮಕ್ಕಳ ಬ್ಯಾಂಕ್ ಪರಿಕಲ್ಪನೆ ಮಾಡಿದ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಸುಸ್ಥಿರ ಜೀವನಕ್ಕಾಗಿ ಹಣಕಾಸು ನಿರ್ವಹಣೆ ಅತ್ಯಗತ್ಯ. ಮಕ್ಕಳ ಸ್ವಾವಲಂಬಿ ಬದುಕಿಗೆ ಈ ಬ್ಯಾಂಕ್ ಸಹಕಾರಿಯಾಗಿದ್ದು,ಅವರು ನಿಯಮಿತವಾಗಿ ಅಲ್ಪ-ಸ್ವಲ್ಪ ಹಣ ಕೂಡಿಟ್ಟಾಗ ತಮ್ಮ ವಿದ್ಯಾರ್ಥಿ ಜೀವನದ ಎಲ್ಲ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಿಕೊಳ್ಳಲು ಈ ಬ್ಯಾಂಕ್ ನಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕ ಎಸ್ ಎಸ್ ಅರಬ ಚಂದ್ರಯಾನದ ಕುರಿತು ಸಂವಾದ ನಡೆಸುತ್ತಾ, ಈ ಯೋಜನೆಯ ಮೂಲಕ ಚಂದ್ರನಲ್ಲಿ ನೀರಿನ ಸ್ಥಳ ಮತ್ತು ಪ್ರಮಾಣ ತಿಳಿಯಲು,ಚಂದ್ರನ ದಕ್ಷಿಣ ಧ್ರುವದ ಕತ್ತಲಿನ ಭಾಗದ ಅನ್ವೇಷಣೆ, ಖನಿಜಗಳ ಅಧ್ಯಯನ ಸೇರಿದಂತೆ ಚಂದ್ರನ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೆಬಿಎಸ್ ಶಿಕ್ಷಕ ಎಸ್ ಆರ್ ಚಾಳೆಕರ ಚಂದ್ರಯಾನ ಯೋಜನೆ ಕುರಿತು ಮಾಹಿತಿ ನೀಡಿದರು. ಕೆಜಿಎಸ್ ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ, ಶಿಕ್ಷಕಿಯರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ,ಎಸ್ ಬಿ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.