ಮಕ್ಕಳ ಸುರಕ್ಷತೆ ಕೊರತೆ: ಶಾಲೆಗೆ ಬೀಗ ಹಾಕಿದ ಗ್ರಾಮಸ್ಥರು

ಸಂಜೆವಾಣಿ ವಾರ್ತೆ
ಹನೂರು: ನ.24:- ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಸುರಕ್ಷತೆಯ ವ್ಯವಸ್ಥೆಯನ್ನು ಇಲಾಖೆಯು ಮಾಡಿಲ್ಲದ ಪರಿಣಾಮ ಮಗುವಿಗೆ ತೊಂದರೆಯಾಗಿದೆ ಎಂದು ಎಸ್.ಡಿ.ಎಂ.ಸಿಯವರು ಮತ್ತು ಗ್ರಾಮಸ್ಥರು ಸೇರಿ ಶಾಲೆಗೆ ಬೀಗ ಹಾಕಿರುವ ಘಟನೆ ಗುರುವಾರ ಬೆಳಿಗ್ಗೆ ಪೆದ್ದನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಪೆದ್ದನ ಪಾಳ್ಯ ಶಾಲೆಯಲ್ಲಿ ಸುತ್ತು ಗೋಡೆ ವ್ಯವಸ್ಥೆ ಇಲ್ಲದಿರುವುದರಿಂದ ಸಾಕು ಕೋಳಿಗಳು ಶಾಲಾ ಆವರಣದಲ್ಲಿ ಓಡಾಡಿಕೊಂಡಿದ್ದು ಒಂದನೇ ತರಗತಿ ಮಗುವಿಗೆ ಕೋಳಿ ಕಚ್ಚಿ ಗಾಯ ಮಾಡಿ ತೊಂದರೆಯಾಗಿದೆ ಇಲಾಖೆಯೂ ಸರಿಯಾದ ರೀತಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ವಿವರ:
ಸರ್ಕಾರಿ ಶಾಲೆಯ ಆವರಣದಲ್ಲಿ ಖಾಸಗಿ ವ್ಯಕ್ತಿಗಳು ವಿನಾಕಾರಣ ಹಸು ಕರುಗಳನ್ನು ಕಟ್ಟುತ್ತಿದ್ದು ಜೊತೆಗೆ ಕೋಳಿಗಳನ್ನು ಸಹ ಸಾಕುತ್ತಿದ್ದೂ ಖಾಸಗಿ ವ್ಯಕ್ತಿಗಳು ಶಾಲಾ ಜಾಗವನ್ನು ನಮ್ಮದು ಎಂದು ಈಗಾಗಲೇ ಕೋರ್ಟ್ ಮೊರೆ ಹೋಗಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ಬಂದ ಮಾಹಿತಿ ಆದರೆ ನೆನ್ನೆ ದಿನ ನಲಿಕಲಿ ಶಾಲೆಯ ಮಗುವಿಗೆ ಕೋಳಿಯೊಂದು ಕಚ್ಚಿ ಗಾಯ ಮಾಡಿದ್ದು ತುಂಬಾ ತೊಂದರೆಯಾಗಿದೆ ಎಂಬುದು ಎಸ್.ಡಿ.ಎಂ.ಸಿ. ಯವರ ವಾದವಾಗಿದೆ.
ಶಾಲೆಗೆ ಬೀಗ:
ಶಾಲೆ ದಾಖಲಾತಿಯು ಶಾಲೆಯ ಹೆಸರಲ್ಲಿ ಇಲ್ಲದ ಪರಿಣಾಮ ಖಾಸಗಿ ವ್ಯಕ್ತಿ ಶಾಲೆಗೆ ಜಾಗ ನೀಡಿದವರೇ ಇಂದು ಇದನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಶಾಲೆಗೆ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ಸಹ ಶಾಲೆ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಎಸ್ ಡಿ ಎಂ ಸಿ ಯವರು ಶಾಲೆಗೆ ಬೀಗ ಹಾಕಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರ ಜೊತೆಗೆ ಚರ್ಚೆ ಮಾಡಿ ಶಾಲೆಯನ್ನು ತೆರೆಯುವಂತೆ ಮಾತುಕತೆ ನಡೆಸಿದರು ಪಟ್ಟು ಬಿಡದ ಗ್ರಾಮಸ್ಥರ ಪ್ರತಿಭಟನೆಯಿಂದ ಒಂದು ದಿನ ಪೂರ್ತಿ ಶಾಲೆಗೆ ಬೀಗ ಹಾಕಿ ಬಂದ್ ಮಾಡಲಾಗಿತ್ತು. ಇದರಿಂದ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಹೊರಗುಳಿದು ತೆರಳ ಬೇಕಾಯಿತು.