ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕ-ಪೋಷಕರ ಪಾತ್ರ ಪ್ರಮುಖ

ಕಲಬುರಗಿ.ಜೂ.01: ತನಗಾಗಿ ಏನನ್ನು ಪ್ರಾರ್ಥಿಸದ ತಾಯಿ, ತನಗಾಗಿ ಏನನ್ನು ಮಾಡಿಕೊಳ್ಳದ ತಂದೆ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸುವ ಮುಗ್ದ ಜೀವಿಗಳು. ಮಗುವಿಗೆ ಶಿಕ್ಷಣ, ಸಂಸ್ಕಾರ, ಬುದ್ಧಿಯನ್ನು ನೀಡಿ, ವ್ಯಕ್ತಿಯನ್ನು ಶಕ್ತಿಯನ್ನಾಗಿಸುವಲ್ಲಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕ-ಪೋಷಕರ ಪಾತ್ರ ಪ್ರಮುಖವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದ ‘ಕೊಹಿನೂರ ಇಂಗ್ಲೀಷ್ ಸ್ಪೋಕನ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಪಾಲಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿಸಿ, ಸಮಾಜದ ದೊಡ್ಡ ಆಸ್ತಿಯನ್ನಾಗಿಸಿ ಪಾಲಕರು ಆದರ್ಶರಾಗುತ್ತಾರೆ. ಮಕ್ಕಳು ಮುಂದೆ ಬೆಳೆದು ದೊಡ್ಡವರಾದ ಮೇಲೆ ತಮ್ಮ ಪಾಲಕ ಅಥವಾ ಪೋಷಕರನ್ನು ಎಂದಿಗೂ ಕೂಡಾ ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ದಿ ಮಾಡಬಾರದು. ದೊಡ್ಡವರಾದ ಮಕ್ಕಳನ್ನು ಪಾಲಕರು ಸಂಪೂರ್ಣ ನಿಯಂತ್ರಣ ಸಾಧಿಸಬೇಕು ಎಂಬ ಭಾವನೆಗಿಂದ ಗೆಳೆಯನ ರೀತಿಯಲ್ಲಿ ಕಾಣುವುದು ಉತ್ತಮ. ಮಕ್ಕಳು ತಮ್ಮ ಪಾಲಕರ ಮಾತುಗಳನ್ನು ಆಲಿಸಿ, ಮುನ್ನೆಡೆಯಬೇಕು. ತಮ್ಮ ಬೆಳವಣಿಗೆಯಲ್ಲಿ ಪಾಲಕರ ಶ್ರಮ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ನಿರ್ದೇಶಕ ದತ್ತು ಹಡಪದ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ ಹಾಗೂ ವಿದ್ಯಾರ್ಥಿಗಳಿದ್ದರು.