
ಸಂಜೆವಾಣಿ ವಾರ್ತೆ
ಕುಕನೂರು, ನ.16: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕುಕನೂರು ಘಟಕ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಿದ್ದಲಿಂಗನಗರ ಮಂಗಳೂರು ಇವರ ಸಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಾಹರಲಾಲ್ ನೆಹರು ಜನ್ಮದಿನಾಚರಣೆಯನ್ನು ಅತ್ಯಂತ ಸರಳ ಹಾಗೂ ಸಂಭ್ರಮದೊಂದಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದಲಿಂಗನಗರ ಮಂಗಳೂರಿನಲ್ಲಿ ಆಚರಿಸಲಾಯಿತು. ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ದೇಶದ ಸಮಗ್ರ ಅಭಿವೃದ್ಧಿಗಾಗಿ ಹಗಲು ಇರುಳು ಶ್ರಮಿಸಿದರು. ಬಡತನದ ನಿರ್ಮೂಲನೆಗಾಗಿ ಹಲವಾರು ಯೋಜನೆಗಳನ್ನು ತಂದರು. ಮುಖ್ಯವಾಗಿ ಪಂಚವಾರ್ಷಿಕ ಯೋಜನೆ ಹಾಗೂ ವಿದೇಶಾಂಗ ನೀತಿಯನ್ನು ಜಾರಿಗೆ ತಂದರು, ಪಂಚಶೀಲ ತತ್ವವನ್ನು ಜಾರಿಗೆತಂದರು. ನೆಹರುಜೀಯವರಿಗೆ ಮಕ್ಕಳೆಂದರೆ ಪಂಚಪ್ರಾಣ, ಮಕ್ಕಳು ನಾಡಿನ ಸಂಪತ್ತು, ಇಂದಿನ ಮಕ್ಕಳೇ ನಾಳಿನ ನಾಡ ಪ್ರಜೆಗಳು, ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡುವ ಬದಲು ಇದೇ ದಿನವನ್ನು ಮಕ್ಕಳ ಜಯಂತಿಯನ್ನಾಗಿ ಆಚರಿಸಬೇಕೆಂದರು. ಅವರ ಕರೆಯ ಮೇರೆಗೆ 1956 ರಿಂದ ಮಕ್ಕಳ ಜಯಂತಿಯನ್ನು ಆಚರಿಸುತ್ತಾ ಬರಲಾಯಿತು. ಮಕ್ಕಳೆಲ್ಲ ನೆಹರುಜಿಯವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ಮಕ್ಕಳ ಸರ್ವಾಂಗೀಣ ಏಳಿಗೆಗಾಗಿ ಇವರು ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಅದರಲ್ಲಿ ಮುಖ್ಯವಾಗಿ ಮಕ್ಕಳ ಹಕ್ಕುಗಳು.ಅದರಲ್ಲಿ ಮೊಟ್ಟಮೊದಲಿಗೆ ಜಾರಿಗೆ ತಂದರು. ಮಕ್ಕಳು ದೇವರು ಇದ್ದಂತೆ, ಅರಳುವ ಹೂಗಳಂತೆ, ನಾಳಿನ ನಾಡ ಶಿಲ್ಪಿಗಳು ಕೂಡ ಅವರೇ. ಆದ್ದರಿಂದ ಅವರ ಪ್ರತಿಭೆಯನ್ನು ಬೆಳಗಿಸಲು ಅರಳಿಸಲು ಇಂದು ನಮ್ಮ ಕುಕುನೂರು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆಯೆಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕುಕನೂರು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹನುಮಂತಪ್ಪ ಏನ. ಉಪ್ಪಾರ್ ಹೇಳಿದರು. ಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಚಿನ್ನೂರ್ ಅವರು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ,ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸರ್ವರೂ ಶ್ರಮಿಸಬೇಕು ಎಂದು ಕರೆ ನೀಡಿದರು. ಬಸವರಾಜ್ ಆಟದ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಆಟಗಳು ಮಕ್ಕಳ ಮನೋವಿಕಾಸಕ್ಕೆ ಹಾಗೂ ದೈಹಿಕ ಸದೃಢತೆಗೆ ಸಹಕಾರಿಯಾಗಿವೆ ಎಂದರು. ಉರ್ದು ಶಾಲೆಯ ಮುಖ್ಯ ಗುರುಗಳಾದ ಕೊಟ್ರಯ್ಯ ಕಟ್ಟಿಗಿಮಠ ಮಾತನಾಡುತ್ತಾ 6 ರಿಂದ 14 ವರ್ಷದ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಸೇರಬೇಕು. ತಮ್ಮ ಹಕ್ಕುಗಳನ್ನು ಅವರು ಪಡೆದು ದೇಶದ ಸತ್ಪ್ರಜೆಗಳಾಗಬೇಕು. ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಬೇಕು ಒಳ್ಳೆಯ ಶಿಕ್ಷಣವನ್ನು ಪಡೆದು ನಾಡಿನ ಒಳ್ಳೆಯ ನಾಯಕರಾಗಿ ದೇಶವನ್ನ ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಕರೆ ನೀಡಿದರು. ಅತ್ಯಂತ ಸಂಭ್ರಮದ ಈ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದಲಿಂಗನಗರ ಮಂಗಳೂರಿನ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಗಳೇಶ್ ಯತ್ನಟ್ಟಿಯವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಅನಿಲ್ ಕುಮಾರ್ ನಿಂಗಾಪುರ್ ನಿರ್ವಹಿಸಿ ವಂದಿಸಿದರು.