ಮಕ್ಕಳ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ

ಹುಲಸೂರ:ಎ.23: ‘ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗಳ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ತಾಂಡೂರ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

‘ಆಯಾ ಗ್ರಾಮಗಳಲ್ಲಿ ಇದುವರೆಗೆ 3,415 ಮನೆಗಳ ಸಮೀಕ್ಷೆ ಮಾಡಲಾಗಿದ್ದು, 900 ಮನೆಗಳು ಬಾಕಿ ಉಳಿದಿವೆ. ಇವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದರು.

‘ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ನರೇಗಾ ಯೋಜನೆಯ ‘ದುಡಿಯೋಣ ಬಾ’ ಅಭಿಯಾನದಡಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು’ ಎಂದು ಹೇಳಿದರು.ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಜಯಪ್ರಕಾಶ ಚವ್ಹಾಣ ಮಾತನಾಡಿ, ‘ತಾಲ್ಲೂಕಿನಲ್ಲಿ ಗೋರ್ಟಾ (ಬಿ) ಹಾಗೂ ಮಿರಖಲ್ ಗ್ರಾಮ ಪಂಚಾಯಿತಿಗಳು ಸಮೀಕ್ಷೆ ಕಾರ್ಯದಲ್ಲಿ ಹಿನ್ನಡೆಯಿದ್ದು ತಕ್ಷಣವೇ ಕಾರ್ಯೋನ್ಮುಖರಾಗಿ ಪ್ರಗತಿ ಸಾಧಿಸಬೇಕು. ಸಮೀಕ್ಷೆ ಶರವೇಗದಲ್ಲಿ ಸಾಗುವಂತೆ ಆಯಾ ಪಿಡಿಒ ಅವರು ಹೆಚ್ಚುವರಿ ಸಮೀಕ್ಷೆದಾರರನ್ನು ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಬೇಕು’ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಭೀಮಶೆಪ್ಪ ದಂಡಿನ್‌, ಬಸವರಾಜ ಸಂಕಗೊಂಡ, ಓಂಕಾರ ಬಿರಾದಾರ, ಬಾಬುರಾವ ನಿಲಂಗೆ, ಮಹಾರುದ್ರಪ್ಪ, ತಾಲ್ಲೂಕು ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ ನಾವದಗಿ, ತಾಲ್ಲೂಕು ಐಇಸಿ ಸಂಯೋಜಕ ಗಣಪತಿ ಹರಕುಡೆ ವೆಂಕಟರಾವ, ಡಿಟಿಒ ಬಸವರಾಜ ಬಾಲಕುಂದೆ, ಮಾರುತಿ ಶಿಂದೆ, ಸುನೀಲ ಇದ್ದರು.