
ಗೌರಿಬಿದನೂರು, ಏ.೧೭- ತಾಲ್ಲೂಕಿನ ಚಿಕ್ಕಕುರುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಎಸ್ ಎನ್ ಸಿ ಲಾವಲಿನ್ ಅಟ್ಕಿನ್ಸ್ ಸಂಸ್ಥೆಯು ತಮ್ಮ ಸಿ.ಎಸ್.ಆರ್ ಅನುದಾನದಡಿಯಲ್ಲಿ ಐ ಲವ್ ಟು ಕೇರ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಸೌರ ವಿದ್ಯುತ್ ಅಳವಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ವೇಳೆ ಅಟ್ಕಿನ್ಸ್ ಕಂಪನಿಯ ಮುಖ್ಯಸ್ಥರಾದ ಜಿ.ಭಾರದ್ವಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಕಂಪನಿಯು ಶ್ರಮಿಸುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಅಗತ್ಯ ಸೌಲಭ್ಯಗಳು ದೊರೆಯುತ್ತವೆ.

ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಂಡು ರಾಷ್ಟ್ರಕ್ಕೆ ಆಸ್ತಿಯಾಗಬೇಕಾದ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಾಣುವುದು ನಮ್ಮೆಲ್ಲರ ಅದೃಷ್ಟವಾಗಿದೆ ಎಂದು ತಿಳಿಸಿದರು.
ಐ ಲವ್ ಟು ಕೇರ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ನಂದಿನಿಜಗನ್ನಾಥ್ ಮಾತನಾಡಿ, ಹೆಣ್ಣು ಮಕ್ಕಳು ಬಡತನ ಮತ್ತು ಕೆಲಸದ ಒತ್ತಡದಲ್ಲಿ ಶಾಲೆಯನ್ನು ತೊರೆದು ಶಿಕ್ಷಣದಿಂದ ವಂಚಿತರಾಗದೆ ಉನ್ನತ ಶಿಕ್ಷಣದವರೆಗೂ ಕಲಿಯಬೇಕಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವುದು ನಮ್ಮ ಟ್ರಸ್ಟ್ ನ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಶಿಧರ್ ಕುಲಹಳ್ಳಿ, ಸವಿತ, ಸಹನಾ, ರಾಮಚಂದ್ರ, ಮಹಮದ್ ಕ್ವೈಸ್, ದಿವ್ಯ, ಶೈಲಜಾ, ಶಂಕರ್, ವರುಣ್, ಮೋಹನ್, ಸರ್ವಮಂಗಳ, ವಿನಯ್, ಶಾಲೆಯ ಮುಖ್ಯ ಶಿಕ್ಷಕರಾದ ಶೈಲಜಾ, ಸಹ ಶಿಕ್ಷಕರಾದ ಸಿ.ಎಸ್.ಸತೀಶ್, ಬಿ.ವಿ.ಜಯಮಾಲಾ, ಸಿ.ಕೆ.ರಾಜಲಕ್ಷ್ಮಿ, ಆರ್.ಎಸ್.ಸಿದ್ದಗಂಗಮ್ಮ ಹಾಜರಿದ್ದರು.