ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಕ್ರಮ-ಡಿಡಿಪಿಐ ಕೃಷ್ಣಮೂರ್ತಿ

ಕೋಲಾರ, ಮಾ,೨೪- ಕಲಿಕಾ ಗುಣಮಟ್ಟ ಹಾಗೂ ಕಲಿಕಾ ನ್ಯೂನ್ಯತೆ,ಪ್ರಗತಿ ಅರಿಯಲು ಜಿಲ್ಲಾದ್ಯಂತ ಮಾ.೨೭ ರಿಂದ ಏ.೧ ರವರೆಗೂ ೫ ಮತ್ತು ೮ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ನಡೆಯುತ್ತಿದ್ದು, ಇದು ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಗೆ ಕಾರಣವಾಗಿರುವ ಕುರಿತು ಪೋಷಕರಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಶಿವರಾಮೇಗೌಡ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ೫ ಮತ್ತು ೮ನೇ ತರಗತಿಗೆ ನಡೆಯುತ್ತಿರುವ ಈ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ ಮತ್ತು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಮೌಲ್ಯಾಂಕನವೂ ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ, ಇದು ಕೇವಲ ಮೌಲ್ಯಾಂಕನವಾಗಿರುತ್ತದೆ, ಈ ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿ ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆ ನೀಗಿಸಲು ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಮೌಲ್ಯಾಂಕನ ಫಲಿತಾಂ ವನ್ನು ಸಂಬಂಧಿಸಿದ ಪೋಷಕರು, ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು, ಈ ಮೂಲಕ ಫಲಿತಾಂಶದ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ತಿಳಿಸಿರುವ ಅವರು, ಪಠ್ಯಪುಸ್ತಕವನ್ನಾಧರಿಸಿ ಮೌಲ್ಯಾಂಕನಕ್ಕೆ ಪ್ರಶ್ನೆಗಳನ್ನು ಸಿದ್ದಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.