ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಅಗತ್ಯ

ಚಿಕ್ಕನಾಯಕನಹಳ್ಳಿ, ಜು. ೧೧- ಬಡ ಮಕ್ಕಳ ಅನುಕೂಲಕ್ಕಾಗಿ ಕನಕ ವಿದ್ಯಾಭಿವೃದ್ದಿ ನಿಧಿ ಸ್ಥಾಪನೆಯಾಗಿ ಸಾವಿರಾರು ಮಕ್ಕಳಿಗೆ ಈಗಲೂ ವಿದ್ಯಾಭ್ಯಾಸದ ನೆರವಿನ ಹಸ್ತ ಚಾಚುತ್ತಿರುವುದು ಶ್ಲಾಘನೀಯವಾದುದು. ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಕನಕ ವಿದ್ಯಾಭಿವೃದ್ದಿ ಸಮಿತಿ ವತಿಯಿಂದ ನಡೆದ ನೋಟ್ ಬುಕ್ ವಿತರಣೆ, ವಿದ್ಯಾರ್ಥಿ ವೇತನ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ. ಅಂತಹ ಪ್ರೋತ್ಸಾಹಕ್ಕೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಅಂಕ ಪಡೆಯಿರಿ. ಅಂಕದ ಜತೆಗೆ ವಿವಿಧ ಕಲೆ, ಕೌಶಲ್ಯಗಳನ್ನು ರೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕನಕ ವಿದ್ಯಾಭಿವೃದ್ದಿ ಸಮಿತಿಯ ಸಿ.ಡಿ.ರಾಮಲಿಂಗಯ್ಯ ಮಾತನಾಡಿ, ನಮಗೆ ಬರುವ ಆದಾಯದಲ್ಲಿ ಸ್ವಲ್ಪ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ, ದಾನ-ಧರ್ಮಕ್ಕೆ ಮೀಸಲಿಟ್ಟರೆ ಆ ಧರ್ಮವೇ ನಮ್ಮನ್ನು ಕಾಯುತ್ತದೆ. ಹುಟ್ಟರುವುದಕ್ಕೂ ಸಾರ್ಥಕತೆ ದೊರೆಯುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲೆ ಎನ್.ಇಂದಿರಮ್ಮ ಮಾತನಾಡಿ, ವಿದ್ಯಾಭಿವೃದ್ದಿ ನಿಧಿ ಸಮಿತಿ ಹೆಸರಿನಲ್ಲಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿರುವುದು ಉತ್ತಮವಾದದ್ದು, ಕನಕ ವಿದ್ಯಾಭಿವೃದ್ದಿ ನಿಧಿ ಸ್ಥಾಪನೆ ಮಾಡಲು ದಿವಂಗತ ಕಣ್ಣಯ್ಯನವರ ಸೇವೆ ಸ್ಮರಣೀಯವಾದುದು ಎಂದರು.
ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿಯ ಕಾರ್ಯದರ್ಶಿ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಕಣ್ಣಯ್ಯನವರು ಬಡತನದಲ್ಲಿ ಬೆಳೆದವರು. ವಿದ್ಯಾಭ್ಯಾಸ ಮಾಡಲು ಬಹಳಷ್ಟು ಕಷ್ಟಪಟ್ಟವರು. ನಮ್ಮ ಮುಂದಿನ ಜನಾಂಗವೂ ನನ್ನಂತೆ ವಿದ್ಯಾಭ್ಯಾಸಕ್ಕೆ ಕಷ್ಟ ಪಡಬಾರದೆಂದು ಅನುಕೂಲಸ್ಥರನ್ನು ಭೇಟಿ ಮಾಡಿ ಅವರಿಂದ ನಿಧಿ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಕೊಡುಗೆ ಅಪಾರ ಎಂದ ಅವರು, ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ತಾಲ್ಲೂಕಿನ ಹಲವು ಶಾಲೆಗಳಿಗೆ ನೋಟ್ ಬುಕ್ ವಿತರಣೆ, ಸನ್ಮಾನಕ್ಕೆ ಹೆಸರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ, ವೈದ್ಯ ಡಾ.ವಿಜಯ್‌ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.