
ಭಾಲ್ಕಿ:ಮಾ.3: ಇಲ್ಲಿಯ ಹಿರೇಮಠ ಸಂಸ್ಥಾನಕ್ಕೆ ಈಚೆಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಭೇಟಿ ನೀಡಿದರು. ಬಳಿಕ ಶ್ರೀಮಠದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರಿಂದ ಕುಲಪತಿಗಳು ಆಶೀರ್ವಾದ ಪಡೆದು ಕೊಂಡರು.
ನಂತರ ಮಾತನಾಡಿದ ಅವರು, ಗಡಿ ಭಾಗದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಅತ್ಯುತ್ತಮ ಸಮಾಜ ಸೇವೆ ಮಾಡುತ್ತಿದ್ದಾರೆ. ಅದರಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಮೌನ ಸೇವೆ ಮಾದರಿಯೆನಿಸಿದೆ. ಜತೆಗೆ ತಮ್ಮ ಸಂಸ್ಥೆಯಲ್ಲಿ ಹೆತ್ತವರಿಗೆ ಬೇಡವಾದ ನವಜಾತ ಶಿಶು, ಮಕ್ಕಳನ್ನು ಪೋಷಣೆ ಮಾಡುತ್ತಿರುವುದು ಅತ್ಯಂತ ಶ್ರೇಷ್ಠ ಎನಿಸಿದೆ. ಇದೊಂದು ಅಪರೂಪದ ದೇವರು ಮೆಚ್ಚುವಂತಹ ಸೇವೆಯಾಗಿದೆ.
ಶ್ರೀಗಳ ಸೇವೆ ಹೀಗೆ ಮುಂದುವರೆಯಲ್ಲಿ ಅವರ ಆಶೀರ್ವಾದ, ಮಾರ್ಗದರ್ಶನ ನಮ್ಮೆಲ್ಲರ ಮೇಲಿರಲಿ ಎಂದು ತಿಳಿಸಿದರು. ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕುಲಪತಿ ಡಾ.ಕೆ.ಬಿ.ಗುಡಸಿ ಅವರು ಸರಳ, ಸಾತ್ವಿಕ ವ್ಯಕ್ತಿಗಳಾಗಿದ್ದಾರೆ. ಅವರು ನಮ್ಮ ಶ್ರೀಮಠಕ್ಕೆ ಬಂದು ಆಶೀರ್ವಾದ ಪಡೆದು ಕೊಂಡಿರುವುದು ಸಂತಸ ತರಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‍ನ ನಿರ್ದೇಶಕ ಶಶಿಧರ ಕೋಸಂಬೆ ಜತೆಗಿದ್ದರು.