ಮಕ್ಕಳ ರಕ್ಷಣೆಗೆ ಶಿಕ್ಷಕರು, ಪೋಷಕರು ಗಮನ ಹರಿಸಬೇಕು: ಜಿಲ್ಲಾಧಿಕಾರಿ

ಹಾವೇರಿ.ನ.17: ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳಿಗೆ ಹೆಚ್ಚಿನ ರಕ್ಷಣೆ ಬೇಕಾಗಿದೆ. ಮಕ್ಕಳ ರಕ್ಷಣೆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ಮಂಗಳವಾರ ನಗರದ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಚೈಲ್ಡ್‍ಲೈನ್ ಸೇ ದೋಸ್ತಿ ವೀಕ್(ಮಕ್ಕಳ ಸ್ನೇಹಿ ಸಾಪ್ತಾಹ)ದ ಅಂಗವಾಗಿ ಹಮ್ಮಿಕೊಂಡಿದ್ದ ಪೋಕ್ಸೋ ಕಾಯ್ದೆ ಕುರಿತು ಅರಿವು ಹಾಗೂ ಮಕ್ಕಳ ರಕ್ಷಣೆ ಕುರಿತ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಕ್ಕಳ ಸ್ನೇಹಿ ಸಾಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಗಿದೆ. ಮಕ್ಕಳು ತಮ್ಮ ಯಾವುದೇ ಸಮಸ್ಯೆಗಳು ಇದ್ದರೇ 1098ಕ್ಕೆ ಕರೆಮಾಡಿ ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರಕವಾದ ಪರಿಹಾರವನ್ನು ಒದಗಿಸಲಾಗುವುದು ಎಂದು ಮಕ್ಕಳಿಗೆ ತಿಳಿಸಿದರು.
ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಸಭೆ ನಡೆಸುವಂತೆ ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‍ಗಳಲ್ಲಿ ಮಕ್ಕಳ ಸಭೆಯನ್ನು ಮಾಡಲಾಗುವುದು. ಮಕ್ಕಳು ತಮ್ಮ ಪಾಲಕರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರೀವೀಕ್ಷಣಾಧಿಕಾರಿ ಎಂ.ಬಿ. ಬಸವ ನಾಯ್ಕರ ಮಾತನಾಡಿ, ಸೊನ್ನೆಯಿಂದ 18ವರ್ಷದೊಳಗಿನ ಎಲ್ಲ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಹಿಂಸೆ, ಅತ್ಯಾಚಾರ ಇಂತಹ ಪ್ರಕರಣಗಳು ಪೋಕ್ಸೋ ಕಾಯ್ದೆಯಡಿ ಬರುತ್ತವೆ. ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶಗಳ ಕುರಿತು ಮಾಹಿತಿ ನೀಡಬೇಕು. ಮಕ್ಕಳು ಸಹ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ವಿದ್ಯಾಭ್ಯಾಸ ಕಡೆಗೆ ಆಸಕ್ತಿವಹಿಸಬೇಕು. ಮಕ್ಕಳು ಸ್ವಯಂ ರಕ್ಷಣೆಗೆ ಹಾಗೂ ತಮ್ಮ ಸಮಸ್ಯೆಗಳನ್ನು ತಿಳಿಸಲು 1098ಗೆ ಕರೆ ಮಾಡಬಹುದು. ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್ ಮಾತನಾಡಿ, ಬಾಲ್ಯದಲ್ಲಿಯೇ ಉತ್ತಮ ಮೌಲ್ಯಗಳನ್ನು ಕಲಿತು ಒಳ್ಳೆಯ ನಾಗರಿಕರಾಗಿ ಬೆಳೆಯಬೇಕು. ಮಕ್ಕಳ ರಕ್ಷಣೆ ಜಾಗೃತಿ ಮೂಡಿಸಲು ಚೈಲ್ಡ್‍ಲೈನ್ ಸೇ ದೋಸ್ತಿ ವೀಕ್ (ಮಕ್ಕಳ ಸ್ನೇಹಿ ಸಾಪ್ತಾಹ)ವನ್ನು ಏಳು ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ ಹಾಗೂ 1098 ಸಂಖ್ಯೆ ಮಕ್ಕಳ ಜೀವ ರಕ್ಷಕ ಸಂಖ್ಯೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ ನಿರ್ದೇಶಕಿ ಶ್ರೀಮತಿ ಗೀತಾ ಪಾಟೀಲ್, ಸರ್ ಎಂ ವಿಶ್ವೇಶ್ವರಯ್ಯ ಪ್ರೌಢಶಾಲೆಯ ನಿರ್ದೇಶಕ ಆರ್. ಪ್ರತಾಪ್ ಮಾತನಾಡಿದರು. ಮಕ್ಕಳ ಸಹಾಯವಾಣಿ ತಂಡದ ಸದಸ್ಯ ಮಾರುತಿ ಹರಿಜನ್ ಮಕ್ಕಳ ಸಹಾಯವಾಣಿ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್.ಅಡಿಗ ಇತರರು ಉಪಸ್ಥಿತರಿದ್ದರು.