ಮಕ್ಕಳ ಮೇಲೆ ಜಾನ್ಸನ್ ಲಸಿಕೆ ಪ್ರಯೋಗ

ನವದೆಹಲಿ,ಅ.೩೧- ಅಮೆರಿಕದ ಔಷಧ ಕಂಪನಿ ಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯನ್ನು ೧೨ ರಿಂದ ೧೮ ವರ್ಷದೊಳಗಿನ ಮಕ್ಕಳ ಮೇಲೆ ಪ್ರಯೋಗಿಸಲು ತೀರ್ಮಾನಿಸಿದೆ.
ಮಹಾಮಾರಿ ಕೊರೊನಾ ಸೋಂಕಿಗೆ ಅಂಕುಶ ಹಾಕಲು ಜಗತಿನಾದ್ಯಂತ ಲಸಿಕೆ ಕಂಡುಹಿಡಿಯಲು ವಿವಿಧ ಔಷಧ ಕಂಪನಿಗಳು ತೀವ್ರ ಪ್ರಯತ್ನ ನಡೆಸಿದೆ.
ಚಳಿಗಾಲ ಸಮೀಪಿಸುತ್ತಿರುವುದರಿಂದ ಸೋಂಕಿನ ಪ್ರಮಾಣ ಹೆಚ್ಚಳವಾಗುವ ಭೀತಿ ಎದುರಾಗಿದೆ. ಆದರೆ ಸಕಾಲದಲ್ಲಿ ಲಸಿಕೆ ಬಂದರೆ ವೈರಾಣುವಿಗೆ ಮೂಗುದಾರ ಹಾಕಬಹುದಾಗಿದೆ.
೨ನೇ ಹಂತದಲ್ಲಿ ಸೋಂಕು ಹೆಚ್ಚಳವಾಗುವ ಭೀತಿ ಎದುರಾಗಿದೆ. ಇದುವರೆಗೆ ಜಗತ್ತಿನಲ್ಲಿ ೪೬ ದಶಲಕ್ಷ ಜನರಿಗೆ ಸೋಂಕು ತಗುಲಿದ್ದು, ೧,೧೯,೩೭೭೪ ಜನರು ಮೃತಪಟ್ಟಿದ್ದಾರೆ. ಈ ಅಂಕಿ-ಅಂಶವನ್ನು ಗಮನಿಸಿದರೆ ಮತ್ತೆ ಆತಂಕ ಎದುರಾಗಲಿದೆ.
ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಔಷಧ ಕಂಪನಿಗಳು ಅತ್ಯಂತ ತ್ವರಿತ ಗತಿಯಲ್ಲಿ ಕೋವಿಡ್-೧೯ಕ್ಕೆ ಕಡಿವಾಣ ಹಾಕಲು ಲಸಿಕೆ ಅಭಿವೃದ್ಧಿಪಡಿಸಲು ಔಷಧ ಕಂಪನಿಗಳು ಮತ್ತು ಸಂಘಟನೆಗಳು ವೈಯಕ್ತಿಕವಾಗಿ ಅಥವಾ ಸರ್ಕಾರದ ಪಾಲುದಾರಿಕೆಯಲ್ಲಿ ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಕೆಲವೊಂದು ಕಂಪನಿಗಳು ಈಗಾಗಲೇ ಪರೀಕ್ಷೆ ನಡೆಸಿ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದೆ. ಇನ್ನು ಕೆಲವು ಹಂತಗಳಲ್ಲಿ ಪರೀಕ್ಷೆ ನಡೆಸಬೇಕಾಗಿರುವುದರಿಂದ ಅಂತಿಮ ಹಂತ ತಲುಪಿಲ್ಲ.
ಅಮೆರಿಕದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ೧೨ ರಿಂದ ೧೮ ವರ್ಷದೊಳಗಿನ ಹುಡುಗರ ಮೇಲೆ ಲಸಿಕೆ ಪ್ರಯೋಗಿಸಲು ಮುಂದಾಗಿದೆ. ಈ ಸಂಬಂಧ ಮಕ್ಕಳ ಪೋಷಕರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದೆಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಲಸಿಕೆ ಕಂಡುಹಿಡಿಯುವ ಮುಂಚೂಣಿಯಲ್ಲಿರುವ ನೊವಾಕ್ಸ್ ದೊಡ್ಡ ಪ್ರಮಾಣದಲ್ಲಿ ಲಸಿಕೆ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಮುಂದಿನ ತಿಂಗಳು ಮೆಕ್ಸಿಕೊದಲ್ಲಿ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ.
ಭಾರತದಲ್ಲೂ ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕೇಂದ್ರಾಡಳಿತ ಮತ್ತು ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ರೆದಿದ್ದು, ತಳಮಟ್ಟದಿಂದ ಲಸಿಕೆ ಸಮನ್ವಯತೆ ಮತ್ತು ನಿಗಾ ವಹಿಸಲು ಸಮಿತಿಗಳನ್ನು ರಚಿಸುವಂತೆ ಸೂಚಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೂ ಪತ್ರ ಬರೆದಿದ್ದು, ಲಸಿಕೆ ಲಭ್ಯವಾಗುತ್ತಿದ್ದಂತೆ ಆಧ್ಯತೆ ಮೇರೆಗೆ ಪೂರೈಸಲು ಈ ಸಮಿತಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.