ಮಕ್ಕಳ ಮೇಲಿನ ದುಷ್ಪರಿಣಾಮ ಕುರಿತು ಸಂವಾದ ಕಾರ್ಯಕ್ರಮ

ಮೈಸೂರು, ನ.11:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮೈಸೂರು ಯೂನಿಸೆಫ್ ಹೈದ್ರಾಬಾದ್ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಕ್ಕಳ ಅಹವಾಲು ವಿಚಾರಣೆ ಹಕ್ಕುಗಳ ಪ್ರತಿಪಾದನೆಗಾಗಿ ಕೋವಿಡ್-19 ಸಂದರ್ಭದಲ್ಲಿ ಮಕ್ಕಳ ಮೇಲಿನ ದುಷ್ಟಪರಿಣಾಮ ಕುರಿತು ಸಂವಾದ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಆಂಥೋಣಿ ಸಬಾಸ್ಟಿನ್ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳ ಜೊತೆ ಮಾತನಾಡಿ ಅವರ ನೋವನ್ನು ಅರ್ಥಮಾಡಿಕೊಂಡು ಪರಿಹಾರಿಕ ರೂಪದಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಮೈಸೂರು ಜಿಲ್ಲೆಗಳಿಂದ ಮಕ್ಕಳು ಬಂದಿದ್ದಾರೆ. ಅವರ ನೋವನ್ನು ಅರಿತು ಅದನ್ನು ಪರಿಹರಿಸುವ ಕಾರ್ಯ ನಡೆಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಪರಶುರಾಮ್ ಎಂ.ಎಲ್.ಮಾತನಾಡಿ ಪ್ರತಿ ಜಿಲ್ಲೆಯಲ್ಲಿ ಇದೊಂದು ಕನಸು, ಇದೊಂದು ವಿಚಾರ, ಮಕ್ಕಳಿಂದ ಬರುವಂತಹ ನೋವಿನ ನುಡಿಗಳನ್ನು ಯಾವ ರೀತಿಯಲ್ಲಿ ದಾಖಲಿಸಿಕೊಂಡು ಅವರಲ್ಲಿ ಮುಗುಳ್ನಗೆಯನ್ನು ಮೂಡಿಸಬಹುದು ಎನ್ನುವಂತಹ ಒಂದು ಪ್ರಯತ್ನ. ಯಾಕೆಂದರೆ ಕೋವಿಡ್ ಸಂದರ್ಭ ಬೇರೆ ರೀತಿಯಾದ ಪಾಠಗಳನ್ನು ನಮ್ಮೆಲ್ಲರಿಗೂ ಕಲಿಸಿದೆ. ಅದರಲ್ಲೂ ಮಕ್ಕಳು ಚಿಂತಾಕ್ರಾಂತರಾಗಿ ಬಹಳಷ್ಟು ಭಿನ್ನವಾದ ವಿಭಿನ್ನವಾದ ನೋವಿಗೆ ಅವರು ಬಲಿಯಾಗಿದ್ದಾರೆ. ಇತ್ತ ಆನ್ ಲೈನ್ ಶಿಕ್ಷಣದಲ್ಲಿ ವಿದ್ಯುತ್ ಇಲ್ಲದೆ ಇರುವುದು, ಸಿಮ್ ಗೆ ಕರೆನ್ಸಿ ಹಾಕಿಸಲಾರದೇ ಇರುವ ನೋವಿನಲ್ಲಿ ಪೆÇೀಷಕರು, ಅಲ್ಲದೆ ಊಟದ ತಟ್ಟೆಯಲ್ಲಿ ಅನ್ನವೇ ಇಲ್ಲದಂತಹ ಪರಿಸ್ಥಿತಿಯಲ್ಲಿ ಮಕ್ಕಳು, ಮಲಗಲು ಜಾಗವಿಲ್ಲದೆ ಒಟ್ಟಿಗೆ ಇರಬೇಕಾದಂತಹ ಕಿರುಕೋಣೆಯಲ್ಲಿ ಬಂಧಿಯಾದಂತಹ ಮಕ್ಕಳು ಹೀಗೆ ಬಹಳಷ್ಟು ಈ ಆಯೋಜನೆಯ ಪ್ರವಾಸದಲ್ಲಿ ಬಹಳಷ್ಟು ಭಿನ್ನ ಭಿನ್ನವಾದ ಅಭಿಪ್ರಾಯಗಳನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಅದರಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಐದೈದು ಮಕ್ಕಳನ್ನು ಆಯ್ದುಕೊಂಡು ಭಿನ್ನವಾದ ಅಂಶಗಳೇನಿದೆ, ಅದನ್ನು ಆಯೋಗ ಕೇಳಿಕೊಂಡು ಪರಿವರ್ತಿಸಿ ಯಾವ ರೀತಿ ಮಕ್ಕಳಿಗೆ ನ್ಯಾಯವನ್ನು ಕೊಡಿಸಬಹುದು ಎಂಬುದರತ್ತ ನಮ್ಮ ಪ್ರಯತ್ನ ಸಾಗಿದೆ. ಅವರ ವಿಚಾರಕ್ಕೆ ಧ್ವನಿಯಾಗಿದ್ದೇವೆ. ಮಕ್ಕಳ ಭಾವನೆಗಳು, ಅವರ ಎದೆಯಲ್ಲಿ ಹೆಪ್ಪುಗಟ್ಟಿರುವ ನೋವನ್ನು ಕರಗಿಸುವ ನಿಟ್ಟಿನಲ್ಲಿ ಸೌಹಾರ್ದಯುತವಾಗಿ, ಅಂತಃಕರಣಯುಕ್ತವಾಗಿ ಮಕ್ಕಳ ಧ್ವನಿಯನ್ನು ಆಲಿಸಿ ನೋವನ್ನು ಪರಿಹರಿಸುವ ಕಾರ್ಯ. ಬುಡಕಟ್ಟು ಮಕ್ಕಳಿರಬಹುದು, ದಿವ್ಯಾಂಗ ಮಕ್ಕಳಿರಬಹುದು, ವ್ಯವಸ್ಥೆಯಲ್ಲಿ ಏನೂ ದಕ್ಕದ ಮಕ್ಕಳಿರಬಹುದು, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ಕಷ್ಟಗಳಿಗೆ ಮರುಗುವ ಹೃದಯವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಂಕರಪ್ಪ ಡಿ, ರಾಘವೇಂದ್ರ ಹೆಚ್.ಸಿ, ಸಂಪನ್ಮೂಲ ವ್ಯಕ್ತಿಯಾಗಿ ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಮತ್ತಿತರರು ಉಪಸ್ಥಿತರಿದ್ದರು.