ಮಕ್ಕಳ ಮನೋವಿಕಾಸಕ್ಕಾಗಿ ಅದಿಮ ಶ್ರಮ ಶ್ಲಾಘನೀಯ

ಕೋಲಾರ, ಮೇ.೨೬:ಭಾರತ ದೇಶ ಬಹು ಸಂಸ್ಕೃತಿಕಗಳಿಂದ ಕೂಡಿದ ಸರ್ವ ಜನಾಂಗದ ಶಾಂತಿಯ ತೋಟ. ಆಧುನಿಕ ಜೀವನ ಶೈಲಿಯ ಚಟುವಟಿಕೆಗಳನ್ನು ಗಮನಿಸಿದಾಗ ಇಲ್ಲಿ ಮಕ್ಕಳ ಕೈಗಳಲ್ಲಿ ಮೊಬೈಲ್ ಇಲ್ಲ. ಮಕ್ಕಳನ್ನು ಮೊಬೈಲ್ ನಿಂದ ದೂರ ಮಾಡುವುದು ಕಷ್ಟಕರ. ಇಂತಹ ಕಾಲದಲ್ಲಿ ಆದಿಮ ಮಕ್ಕಳಲ್ಲಿನ ಪ್ರತಿಬೆಗಳನ್ನು ಹೊರ ತಂದು ಅವರನ್ನು ಮಾನಸಿಕವಾಗಿ ಸದೃಢಗೊಳಿಸುವಲ್ಲಿ ತೊಡಗಿರುವುದು ಅಭಿನಂದನೀಯ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.
ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಮೇ ೨೩ರ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರ ಜನಪದ ಚುಕ್ಕಿ ಮೇಳದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಮಕ್ಕಳನ್ನು ಕೇಂದ್ರೀಕರಿಸಿ ಬೇಸಿಗೆ ಶಿಬಿರವನ್ನು ವರ್ಷದಿಂದ ವರ್ಷಕ್ಕೆ ಉತ್ತಮೋತ್ತಮವಾಗಿ ಆಯೋಜಿಸಿಕೊಂಡು ಬರುತ್ತಿರುವ ಆದಿಮ ಬಳಕ್ಕೆ ಅಭಿನಂದನೆಗಳು. ಆದಿಮ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಸಂಸ್ಕೃತಿ ವಿಸ್ತರಣೆಗೊಳಿಸಿ ಮಾತನಾಡಿ ಹಾರೈಸಿದರು.
ಶಿಬಿರದ ನಿರ್ದೇಶಕರು ಹ.ಮಾ.ರಾಮಚಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಬಿರದ ದಿನಚರಿ, ಮಕ್ಕಳು ತೊಡಗಿಸಿಕೊಂಡ ರೀತಿ, ಪೋಷಕರು ಸಹಕರಿಸಿರುವುದು ಅಭಿನಂಧನೀಯ.. ಬಸವ ಜಯಂತಿಗೆ ಆರಂಭವಾಗಿ ಬುದ್ಧ ಜಯಂತಿಗೆ ಮುಕ್ತಾಯ ಗೊಳ್ಳುತ್ತಿದೆ. ಬುದ್ಧ ನಮ್ಮೊಳಗಿನ ಪ್ರಜ್ಞೆ. ಬುದ್ಧನನ್ನು ಪೂಜಿಸುವುದಲ್ಲ, ಆರಾಧಿಸುವುದಲ್ಲ ನಮ್ಮಲ್ಲಿ ನಾವು ಕಂಡುಕೊಳ್ಳುವುದಾಗಿದೆ. ಆದಿಮ ೧೮-೧೯ ವರ್ಷಗಳಿಂದ ನೆಲದ ನಡೆಯನ್ನು ಮುಂದುವರೆಸಿಕೊಂಡು ಅನೇಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.
ಬಿತ್ತಿದಂತೆ ಬೆಳೆದಿದೆ ಎಂದಿರುವ ಹಿರೀಕರ ಮಾತನ್ನೇಳುತ್ತಾ ಮಕ್ಕಳು ಇವತ್ತು ಪೋಷಕರು ಹೇಳಿದಂತೆ ನಡೆಯುತ್ತಿಲ್ಲ. ಜಾಹೀರಾತುಗಳು ಅವರನ್ನು ಮುನ್ನೆಡೆಸುವಂತಾಗಿದೆ ಆದಿಮ ಪ್ರತಿ ವರ್ಷವೂ ಒಂದು ವಿಷಯವನ್ನು ಕೇಂದ್ರೀಕರಿಸಿ ಅದನ್ನೇ ಶೀರ್ಷಿಕೆಯನ್ನಿಟ್ಟುಕೊಂಡು ಶಿಬಿರ ಆಯೋಜಿಸಲಾಗುತ್ತದೆ.ಅದರಂತೆ ಜನಪದವನ್ನು ಗಮನದಲ್ಲಿರಿಸಿಕೊಂಡು ಈ ಬಾರಿ ಜನಪದ ಚುಕ್ಕಿಮೇಳ ಆಯೋಜಿಸಲ್ಪಟ್ಟಿದೆ ಎಂದು ಹೇಳಿದರು.
ಜಾನಪದ ಎಲ್ಲ ಕಲೆಗಳ ತಾಯಿ ಬೇರು ಆದ್ದರಿಂದ ಮರೆಯಾಗುತ್ತಿರುವ ಸ್ಥಳೀಯ ಜನಪದ ಕಲೆಗಳನ್ನು ಮಕ್ಕಳಿಗೆ ಪರಿಚಯಿಸಿ, ಕಲಿಸಿ, ಪ್ರದರ್ಶನಕ್ಕೆ ಸಿದ್ಧಪಡಿಸಲಾಗಿದೆ. ಸುಮಾರು ನಲವತ್ತು ಜನ ಸಂಪನ್ಮೂಲ ವ್ಯಕ್ತಿಗಳು, ಸ್ವಯಂಸೇವಕರು, ಆರೋಗ್ಯದ ಉಸ್ತುವಾರಿ ವಹಿಸಿಕೊಂಡಿದ್ದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದರು,
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಅವರು ಮಾತನಾಡುತ್ತಾ, ಮೊಬೈಲಿಂದ ಮಕ್ಕಳನ್ನು ಮುಕ್ತಗೊಳಿಸಲು ಸಾಧ್ಯವಿದೆ ಎಂದು ಆದಿಮ ತಂಡ ತೋರಿಸಿಕೊಟ್ಟಿದೆ ಎಂದರು.
ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಸಮಾರೋಪದ ನುಡಿಗಳನ್ನಾಡಿ ಮನೆಗೊಂದು ಹುಂಡಿ, ಹುಂಡಿಗೆ ದಿನಕ್ಕೊಂದು ರುಪಾಯಿ ಹೀಗೆ ಆರಂಭವಾದ ಆದಿಮ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ಸಾಂಸ್ಕೃತಿಕ ಲೋಕದ ಮಹಾನದಿಯಂತೆ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಅವುಗಳಲ್ಲಿ ಮಕ್ಕಳ ಬೇಸಿಗೆ ಶಿಬಿರ ಪ್ರಮುಖವಾಗಿದೆ ಎಂದು ಹೇಳಿದರು.
ಜನಪದ, ಸಿನಿಮಾಪದ, ಟಿ.ವಿ.ಪದ ಈ ಪದಗಳ ಜೊತೆಗೆ ಜನ ಇರುವುದು ಜನಪದದಲ್ಲಿ ಮಾತ್ರ. ಅದಕ್ಕೇ ಜನಪದ ನಿತ್ಯ ಸತ್ಯವಾಗಿದೆ. ಆದಿಮದಲ್ಲಿ ಕಲಿತವರು ಈಗ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಎಲ್ಲೆಗಳು ಮೀರಿ ಆದಿಮ ಸಾಧನೆ ಮಾಡಿ ತೋರಿಸಿದೆ. ನಿಮ್ಮೆಲ್ಲರ ಸಹಕಾರ ಹೀಗೇ ಇರಲಿ, ಸಣ್ಣ ಸಾಸುವೆ ಕಾಳಷ್ಟು ಸಹಕಾರ ನನ್ನದೂ ಇರುತ್ತದೆ ಎಂದರು.
ಇದೇ ಸಂದರ್ಭಧಲ್ಲಿ ಆದಿಮ ಆರಂಭದಲ್ಲಿ ಸಹಾಯಕ್ಕೆ ನಿಂತ ಶಿವಗಂಗೆ ನಿವಾಸಿಗಳಾದ ನಾರಾಯಣಮ್ಮ, ವೆಂಕಟೇಶಪ್ಪ, ವೆಂಕಟರವಣಪ್ಪಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಎನ್.ಮುನಿಸ್ಮಾಮಿ ಎಲ್ಲರನ್ನೂ ಅಭಿನಂದಿಸಿ ಮಾತನಾಡಿದರು,ಕಾರ್ಯಕ್ರಮದ ನಿರೂಪಣೆ, ಆಶಯ ಗೀತೆ, ಶಿಶು ಗೀತೆಗಳನ್ನು ಡಿ.ಆರ್. ರಾಜಪ್ಪ ಆದಿಮ ಗಜಾನನ ಟಿ ನಾಯಕ ನಿರ್ವಹಿಸಿದರು, ಮಾಕಾಂಡೇಯ, ಆದಿಮ ಸ್ವಾಗತಿಸಿದರು, ತುರಂಡಳ್ಳಿ ಶ್ರೀನಿವಾಸ್ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ನೀಲಾ ಸೋಮಶೇಖರ್ ಇದ್ದರು.