ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಕುಂದು ಕೊರತೆ ನಿವಾರಣೆ ಅತ್ಯವಶ್ಯಕ:ಸಿಇಓ ರಾಹುಲ್ ಶಿಂಧೆ

ವಿಜಯಪುರ ಸೆ.02: ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಶಿಕ್ಷಕರ ಕುಂದು ಕೊರತೆ ನಿವಾರಣೆ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಸಭಾಗಂಣದಲ್ಲಿ ಶಿಕ್ಷಕರ ಕುಂದು ಕೊರತೆಗಳನ್ನು ಬಗೆಹರಿಸಲು ಹಮ್ಮಿಕೊಂಡ ಶಿಕ್ಷಣ ಅದಾಲತ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅವರು, ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿಕೊಂಡಿರುವ ಶಿಕ್ಷಣ ಇಲಾಖೆ ಕಾರ್ಯ ಅತಿ ಮುಖ್ಯ ಹಾಗೂ ಮಹತ್ವದ್ದಾಗಿದೆ. ಶಿಕ್ಷಕರ ಹಲವಾರು ಕುಂದು ಕೊರತೆಗಳ ನಿವಾರಣೆಗೆ ಪ್ರತಿ ದಿನ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಕರ ಕುಂದು ಕೊರತೆಗಳನ್ನು ನಿವಾರಿಸಲು ರಾಜ್ಯದಲ್ಲಿಯೇ ಪ್ರಪ್ರಥಮಬಾರಿಗೆ ಶಿಕ್ಷಣ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಿಕ್ಷಕರು ಶಾಲಾ ಭೋಧನೆ ಬಿಟ್ಟು ಕಚೇರಿ ಕಚೇರಿ ಅಲೆದಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಅಸಾಧ್ಯ. ಆದ್ದರಿಂದ ಇಂದಿನ ಮಕ್ಕಳು ನಮ್ಮ ದೇಶದ ಮುಂದಿನ ಸತ್ಪ್ರಜೆಯನ್ನಾಗಿ ಮಾಡಲು ಶಿಕ್ಷಕರ ಕುಂದು ಕೊರತೆಗಳನ್ನು ನಿವಾರಿಸಲು ಏಕಗವಾಕ್ಷಿ ಪದ್ಧತಿಯಲ್ಲಿ ಶಿಕ್ಷಣ ಅದಾಲತ್ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿಲಾಗಿದೆ. ಇದರ ನಿವಾರಣೆಗಾಗಿ ಇಂದು ಈ ಶಿಕ್ಷಣ ಅದಾಲತ್ ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಶಿಕ್ಷಕರು ಈ ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳಿಗೆ ಪರಿಹಾರ ಕಂಡುಕೊಂಡಿದ್ದು ನಿಜಕ್ಕೂ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ ಅಧೀನದಲ್ಲಿ ಬರುವ ಎಲ್ಲ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಹಿತದೃಷ್ಠಿಯಿಂದ ಎಲ್ಲ ಇಲಾಖೆಗಳ ಕುಂದು ಕೊರತೆ ಅದಾಲತ್ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಶಿಕ್ಷಣ ಅದಾಲತ್ ಕಾರ್ಯಕ್ರಮದಲ್ಲಿ ಇಂಡಿ ಮತ್ತು ವಿಜಯಪುರ ಗ್ರಾಮೀಣ ಭಾಗದ ನೂರಾರು ಶಿಕ್ಷಕರು ಬಾಗವಹಿಸಿ ಗಳಿಕೆ ರಜೆ ನಗದೀಕರಣ, ಹಬ್ಬದ ಮುಂಗಡ, ವೇತನ ಬಡ್ತಿ, ಕಾಲಮಿತಿ ಬಡ್ತಿ, ಸ್ಥಗಿತ ವೇತನ ಬಡ್ತಿ, ಸೇವಾ ಪುಸ್ತಕ ಅಪಡೇಟ್ ಮಾಡುವುದು, ಶಿಸ್ತು ಕ್ರಮ, ಪಿಂಚಣಿ, ಜಿಪಿಎಫ್ ಮತ್ತು ವೈಧ್ಯಕೀಯ ಬಿಲ್ಲುಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಅದಾಲತ್ ನಲ್ಲಿ ಆಲಿಸಿ, ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು, ತಮ್ಮ ಕುಂದು ಕೊರತೆಗಳನ್ನು ಪರಿಹಾರ ಮಾಡಿಕೊಳ್ಳುವಲ್ಲಿ ಸಫಲರಾಗಿ ಹರ್ಷವನ್ನು ವ್ಯಕ್ತಪಡಿಸಿದರು. ಜಿಲ್ಲಾ ಶಿಕ್ಷಕರ ಸಂಘದ ಪ್ರತಿನಿದಿ ಅರ್ಜುನ ಲಮಾಣಿ ತಮ್ಮ ಸಂತಸವನ್ನು ವ್ಯಕ್ತಪಡಿಸಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಇಂತಹ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿರುವುದರಿಂದ ಜಿಲ್ಲೆಯ ಶಿಕ್ಷಕ ವರ್ಗಕ್ಕೆ ಉಪಯುಕ್ತವಾಗಿದೆ ಎಂದು ಹೇಳಿದರು. ಇಂತಹ ವಿನೂತನ ಕಾರ್ಯಕ್ರಮ ಆಯೋಜನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಎನ್.ಎಚ್.ನಾಗೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್.ಆಲಗೂರ, ಶ್ರೀಮತಿ ಪ್ರಮೋದಿನಿ ಬಳೋಲಮಟ್ಟಿ, ಉಪ ಯೋಜನಾ ಸಮನ್ವಯಾಧಿಕಾರಿ ಎಮ್.ಎ.ಗುಳೆದಗುಡ್ಡ, ಶ್ರೀಮತಿ ಟಿ.ಎಚ್.ಕೊಲ್ಹಾರ, ರಾಜಶೇಖರ ದೈವಾಡಿ ಸೇರಿದಂತೆ ಜಿಲ್ಲಾ ಪಂಚಾಯತಿ ಮತ್ತು ಬಿಇಒ ಕಾರ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.