ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಜವಾಬ್ದಾರಿ ಬಹುಮುಖ್ಯ:ಸಂತೋಷ ಬಂಡೆ

ಇಂಡಿ: ಸೆ.24:ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಜವಾಬ್ದಾರಿ ಬಹಳಷ್ಟಿದೆ. ಪ್ರತಿನಿತ್ಯ ಮಕ್ಕಳನ್ನು ಶಾಲೆಗೆ ಕಳಿಸುವ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಾ, ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಆಗುವಂತೆ ನೋಡಿಕೊಳ್ಳಬೇಕು ಎಂದು ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಪಾಲಕ-ಶಿಕ್ಷಕರ ಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳಿಗೆ ಜೀವನದ ಒಳ್ಳೆಯ ಮೌಲ್ಯಗಳನ್ನು ಕಲಿಸಿ, ಪ್ರಾಮಾಣಿಕ, ದೇಶಭಕ್ತ, ನಂಬಿಗಸ್ಥ ಹಾಗೂ ಪ್ರೀತಿಯಿಂದ ಕೂಡಿದ ಸಮಾಜದ ರಚನೆ ಮಾಡುವಲ್ಲಿ ಪಾಲಕರ ಪಾತ್ರ ಬಹುಮುಖ್ಯ ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಮಕ್ಕಳಿಗೆ ದಿನನಿತ್ಯ ಎದುರಾಗುವ ಸನ್ನಿವೇಶಗಳ ಬಗ್ಗೆ ಪ್ರಶ್ನಿಸುವ ಗುಣ ಬೆಳೆಸಬೇಕು.ಅದರಿಂದ ಮಕ್ಕಳಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದು, ಮಾಹಿತಿ ಸಂಗ್ರಹಿಸುವುದು, ಜ್ಞಾಪಕಶಕ್ತಿ, ಗಮನ ಕೊಡುವ ಗುಣಗಳು ಹೆಚ್ಚುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಕ ಎಸ್ ಎಸ್ ಅರಬ,ಪಾಲಕ-ಶಿಕ್ಷಕರ ಸಭೆಯು ಮಕ್ಕಳ ಶೈಕ್ಷಣಿಕ ಪ್ರಗತಿ, ತರಗತಿ ಮತ್ತು ಮನೆಯಲ್ಲಿ ವೀಕ್ಷಣೆ,ಕಲಿಕೆಯ ಮೌಲ್ಯಮಾಪನ ಮಾಡಿ ಪ್ರಗತಿ ಸಾಧಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಸುಭಾನಲ್ಲ ಅಂಗಡಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಪಾಲಕರಾದ ಇಮಾಮ್ ಸಾಬ್ ಬೇಪಾರಿ,ಅಲ್ಲಾಭಕ್ಷ ಮುಲ್ಲಾ,ಮಹ್ಮದ್ ಹನೀಫ್ ಕಸಾಬ,ಅಬ್ದುಲ್ ರೆಹಮಾನ್ ಬಾಗವಾನ ಹಾಗೂ ಶಿಕ್ಷಕಿ ಎಸ್ ಪಿ ಪೂಜಾರಿ ಸೇರಿದಂತೆ ಅನೇಕ ಪಾಲಕರು,ತಾಯಂದಿರರು ಉಪಸ್ಥಿತರಿದ್ದರು.