ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ಅಗತ್ಯ

ಕಲಬುರಗಿ.ನ.20:ಇಂದಿನ ಮಕ್ಕಳೆ ನಾಳಿನ ನಾಗರಿಕರಾಗಿರುವದರಿಂದ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವುದು, ಪೌಷ್ಠಿಕ ಆಹಾರ ದೊರೆಯುವ, ಆರೋಗ್ಯ ಕಾಪಾಡುವ, ಆಟೋಟ್‍ಗಳಲ್ಲಿ ಭಾಗವಹಿಸುವ, ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸುವಂತಹ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ದೊರಕಿಸಿಕೊಟ್ಟು ದೇಶದ ಅಮೂಲ್ಯವಾದ ಮಾನವ ಸಂಪನ್ಮೂಲವನ್ನಾಗಿಸುವುದು ಅಗತ್ಯವಾಗಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಅವರು ನಗರದ ಸಮೀಪದ ರಾಜಾಪೂರನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ವಿಶ್ವ ಮಕ್ಕಳ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪ್ರತಿವರ್ಷ ನವ್ಹೆಎಂಬರ್ 20ನ್ನು ‘ವಿಶ್ವ ಮಕ್ಕಳ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ಕೃಷ್ಣ ಮೆನನ್ ಅವರು ಇದನ್ನು ಸೂಚಿಸಿದರು. ವಿಶ್ವಸಂಸ್ಥೆಯು 1954ರಲ್ಲಿ ಅನುಮೋದಿಸಿ ಈ ಆಚರಣೆ ಮಾಡಲು ನಿರ್ಧರಿಸಿತು. ಮಕ್ಕಳ ಬಾಲ್ಯವನ್ನು ಸಂಭ್ರಮದಿಂದ ಕಾಣುವುದು, ಮಕ್ಕಳ ಕಲ್ಯಾಣ ಕಾರ್ಯಕ್ರಮಗಳ ಚಿಂತನೆಯು ಉದ್ದೇಶ ದಿನಾಚರಣೆ ಹಿನ್ನಲೆಯಾಗಿದೆ.
ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಡಿ ಮಾತನಾಡುತ್ತಾ, ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮವಾದ ಜ್ಞಾನ, ನೈತಿಕ ಮೌಲ್ಯಗಳು ನೀಡಿ ರಾಷ್ಟ್ರದ ಸತ್ಪ್ರಜೆಯನ್ನಾಗಿಸಬೇಕು. ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ವೆಚ್ಚ ಮಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉನ್ನತವಾದ ಸಾಧನೆಯನ್ನು ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಶಾಲೆಯ ಸಹ ಶಿಕ್ಷಕರಾದ ಜ್ಯೋತಿ ಎಸ್.ಜಿ., ಸುನೀತಾ ಗುಂಡಗುರ್ತಿ, ಜ್ಯೋತಿಬಾಯಿ ಚಾಗಿ, ಎಸ್.ವಿಶಾಲಾಕ್ಷಿ, ಮಹಾಂತೇಶಕುಮಾರ ಚಿನ್ನಾಕಾರ್, ಸುಜಾತಾ ಕುಂಟೋಜಿ, ಬಿ.ಶಾರದಾ, ವೈಶಾಲಿ ಸಂಕೆ, ಸಿಬ್ಬಂದಿ ತಾರಾಬಾತಿ ಸೇರಿದಂತೆ ಮತ್ತಿತರರಿದ್ದರು.