
ನರೇಗಲ್ಲ,ಮಾ.2:-ನಿಮ್ಮ ಮಕ್ಕಳ ಬಗ್ಗೆ ನಿಮಗೆ ಪ್ರೀತಿಯಿರಲಿ ಆದರೆ ಕುರುಡು ಪ್ರೀತಿ ಮಾತ್ರ ಬೇಡವೇ ಬೇಡವೆಂದು ಸಾಹಿತಿ ಅರುಣ. ಬಿ. ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಸಾಂಸ್ಕøತಿಕ ಸಂಭ್ರಮ-2023ರ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಮ್ಮ ಪ್ರೀತಿ ಅವರನ್ನು ಜೀವನದ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಆದರೆ ನೀವೇನಾದರೂ ಕುರುಡು ಪ್ರೀತಿ ತೋರಿಸಿದರೆ ಅದು ಅವರ ಅವನತಿಗೆ ಕಾರಣವಾಗುತ್ತದೆ. ಹೀಗಾಗದಂತೆ ಎಚ್ಚರಿಕೆ ವಹಿಸಬೇಕಿರುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ ಎಂದು ಕುಲಕರ್ಣಿ ತಿಳಿಸಿದರು.
ಯಾವ ಶಿಕ್ಷಕರೂ ನಿಮ್ಮ ಮಕ್ಕಳ ಬಗ್ಗೆ ದ್ವೇಷವನ್ನಾಗಲಿ, ಪೂರ್ವಾಗ್ರಹ ಪೀಡಿತರಾಗಲಿ ಆಗಿರುವುದಿಲ್ಲ. ನಿಮ್ಮ ಮಕ್ಕಳನ್ನು ತಿದ್ದಲು, ಅವರ ವಿದ್ಯಾಭ್ಯಾಸ ಉತ್ತೇಜಿಸಲು ದಂಡಿಸುತ್ತಾರೆ. ಅಷ್ಟಕ್ಕೇ ನೀವುಗಳು ಶಾಲೆಗೆ ಬಂದು ಶಿಕ್ಷಕರ ಮೇಲೆ ಹರಿಹಾಯ್ದರೆ ಅವರು ನಿಮ್ಮ ಮಕ್ಕಳ ಗೊಡವೆಗೆ ಹೋಗುವುದಿಲ್ಲ. ಇದರಿಂದ ನಿಮ್ಮ ಮಕ್ಕಳ
ಭವಿಷ್ಯ ಮಂಕಾಗುವುದೇ ಹೊರತು ಶಿಕ್ಷಕರಿಗೇನೂ ಆಗುವುದಿಲ್ಲ. ಈ ಬಗ್ಗೆ ನೀವುಗಳು ಜಾಗೃತೆಯಿಂದ ಇರಬೇಕೆಂದು ಕುಲಕರ್ಣಿ ಪಾಲಕರಿಗೆ ಕರೆ ನೀಡಿದರು.
ನಿಮ್ಮ ಮಕ್ಕಳು ಜೀವನದಲ್ಲಿ ಯಾವುದೇ ಮಹತ್ತರ ಹುದ್ದೆಯನ್ನು ಏರಬೇಕೆಂದರೂ ಅದಕ್ಕೆ ಮೂಲ ತಳಹದಿ ಪ್ರಾಥಮಿಕ ಶಿಕ್ಷಣವೆ. ಅದಕ್ಕಾಗಿ ನಿಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಈಗಿನಿಂದಲೆ ಭದ್ರ ಬುನಾದಿ ಹಾಕಿರಿ. ಮನೆಯಲ್ಲಿನ ಮಕ್ಕಳ ಶಾಲೆಯ ಮನೆಗೆಲಸವನ್ನು ನೀವೇ ಮಾಡಿಕೊಡುವ ರೂಢಿಯನ್ನು ಹಾಕಬೇಡಿ. ಇದರಿಂದ ಮಕ್ಕಳು ಪರಾವಲಂಬಿಗಳಾಗುತ್ತಾರೆ. ಮಕ್ಕಳನ್ನು ಪರಾವಲಂಬಿಗಳನ್ನಾಗಿ ಬೆಳೆಸದೆ ಸ್ವಾವಲಂಬಿಗಳನ್ನಾಗಿ ಬೆಳೆಸಲು ಪ್ರಯತ್ನಿಸಿ.
ಎಸ್.ಎ. ವಿ ಬಾಲಕರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಚ್.ಅಬ್ಬಿಗೇರಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಚೇರಮನ್ ಡಾ. ಜಿ.ಕೆ.ಕಾಳೆ ಮಾತನಾಡಿ ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ವಿದ್ಯಾ ಪ್ರೇಮಿಗಳು ಮತ್ತು ಶಿಷ್ಯ ವತ್ಸಲರಾಗಿದ್ದರು. ದೂರದೃಷ್ಟಿಯ ಕನಸನ್ನು ಇಟ್ಟುಕೊಂಡೇ ಅವರು ಈ ಶಾಲೆಯನ್ನು ಸ್ಥಾಪಿಸಿ ಅತ್ಯಂತ ಕಡಿಮೆ ಫೀಯನ್ನು ಇರಿಸಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ಎಚ್.ಅಬ್ಬಿಗೇರಿ, ಅರುಣ ಬಿ. ಕುಲಕರ್ಣಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಿ. ಜಿ. ಕುಲಕರ್ಣಿಯವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಎನ್. ಆರ್. ಗೌಡರ, ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ, ಬಾಲಕರ ಪ್ರೌಢಶಾಲೆಯ ಚೇರಮನ್ ಸೋಮಣ್ಣ ಹರ್ಲಾಪೂರ ಇನ್ನೂ ಮುಂತಾದವರಿದ್ದರು.
ಶಿಕ್ಷಕ ಕೋಳಿವಾಡ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಬಿ. ಜಿ. ಶಿರ್ಸಿ ಸ್ವಾಗತಿಸಿದರು. ಶಿಕ್ಷಕಿ ಮಲ್ಲಮ್ಮ ಶಿಳ್ಳಿನ ವರದಿ ವಾಚನ ನೀಡಿದರು. ಶಿಕ್ಷಕಿ ವಿಶಾಲಾ ಹಳ್ಳಿ ವಂದಿಸಿದರು.