ಮಕ್ಕಳ ಪ್ರೀತಿಯ ಶಿಕ್ಷಕ, ಸಾಹಿತಿ ಶಾಂತಕುಮಾರ್

ಮಧುಗಿರಿ, ಡಿ. ೪- ಬಾಲ್ಯದಲ್ಲಿಯೇ ಪೋಲಿಯೋ ರೋಗಕ್ಕೆ ತುತ್ತಾಗಿ ಬಲಗಾಲು ಬಲಹೀನವಾಗಿದ್ದರೂ ಚಿಕ್ಕಂದಿನಿಂದಲೇ ಕಠಿಣ ಪರಿಶ್ರಮದ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರತಿಭೆ ಶಿಕ್ಷಕ ಸಿಇ ಶಾಂತಕುಮಾರ್ ಅವರ ಶ್ರದ್ಧೆ ಹಾಗೂ ಪರಿಶ್ರಮದಿಂದ ದೈಹಿಕ ಮಿತಿ ಮೀರಿ ಮಕ್ಕಳಿಗೆ ಪ್ರೀತಿಯ ಶಿಕ್ಷಕ, ಪವಾಡ ಭಂಜಕ, ಸಾಹಿತಿಗಳಾಗಿ ಖ್ಯಾತರಾಗಿದ್ದಾರೆ.
ಮೂಲತಃ ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದ ಗಂಗಮ್ಮ, ಈರಲಕ್ಕಪ್ಪ ದಂಪತಿಯ ೪ ನೇ ಪುತ್ರನಾಗಿ ಬಡ ಕುಟುಂಬದಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸುತ್ತಿರುವಾಗಲೇ ರಂಗಭೂಮಿ, ಪೌರಾಣಿಕ ನಾಟಕಗಳತ್ತ ಒಲವು ಬೆಳೆಸಿಕೊಂಡವರು. ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸುತ್ತಿದ್ದ ಇವರು ನಿಧಾನವಾಗಿ ರಂಗಭೂಮಿಯ ಗೀಳು ಹತ್ತಿಸಿಕೊಂಡರು.
ಉನ್ನತ ಶಿಕ್ಷಣವನ್ನು ತುಮಕೂರಿನಲ್ಲಿ ಪಡೆದ ಇವರು, ಟಿಸಿಹೆಚ್ ಮುಗಿದ ನಂತರ ೨೦೦೨ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡಿದ್ದು, ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೇ ದೂರ ಶಿಕ್ಷಣದ ಮೂಲಕ ಬಿಎ ಹಾಗೂ ಬಿಇಡಿಯನ್ನು ಪೂರ್ಣಗೊಳಿಸಿ ಪ್ರಸ್ತುತ ಐ.ಡಿ ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಂತಕುಮಾರ್ ಅವರು ವೃತ್ತಿಯಲ್ಲಿ ಶಿಕ್ಷಕನಾದರೂ ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ. ಸಾಹಿತಿ, ಜಾದೂಗಾರ ಸೇರಿದಂತೆ ಉತ್ತಮ ಶಿಕ್ಷಕ ಕೂಡ. ಕಲಾವಿದನಾಗಿ ಸೈ ಎನಿಸಿಕೊಂಡ ಬಹುಮುಖ ಪ್ರತಿಭೆ. ಶಿಕ್ಷಕ ವೃತ್ತಿಯ ಜತೆ ಗ್ರಾಮೀಣ ಭಾಗದಲ್ಲಿ ಮದ್ಯಪಾನ, ಅನಕ್ಷರತೆ, ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಜಾಗೃತಿಗೊಳಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಮೂಡನಂಬಿಕೆ, ಮಾನಸಿಕ ತೊಂದರೆ ಮೋಸ ಸೇರಿದಂತೆ ವೈಜ್ಞಾನಿಕ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ನಡೆಸಿದ್ದು, ಗಡಿನಾಡಲ್ಲಿ ತೆಲುಗು ಭಾಷೆಯ ಅಬ್ಬರದ ನಡುವೆ ಕನ್ನಡದ ಉಳಿವಿಗಾಗಿ ಈ ಭಾಗದ ಐತಿಹಾಸಿಕ ಹಿನ್ನೆಲೆ, ನಾಡುನುಡಿ, ಪ್ರೇಮ ಇತ್ಯಾದಿಗಳಿಗೆ ಸಂಬಂಧಿಸಿದ ೨೦೦ ಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿರುವ ಕೀರ್ತಿ ಇವರದ್ದು.
ಬಹುಮುಖ ಪ್ರತಿಭೆ
ಶಿಕ್ಷಕ ಶಾಂತಕುಮಾರ್ ’ಬರವಣಿಗೆ ಬಾರದವನು’ ಹಾಗೂ ’ಕುಡುಕ ಕಟ್ಟಿದ ತಾಳಿ’ ಎಂಬ ಪೌರಾಣಿಕ ನಾಟಕಗಳಲ್ಲೂ ಅಭಿನಯಿಸಿದ್ದು , ೨೦೦೬ ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಹನಿಹನಿ ಇಬ್ಬನಿ ಕಾವ್ಯ ಬಳಗದ ಸದಸ್ಯರಾಗಿರುವ ಇವರು ’ನನ್ನವ್ವ ಕವನ ಸಂಕಲನವನ್ನು ಹೊರತಂದಿದ್ದು, ಇತ್ತೀಚೆಗೆ ಮತ್ತೊಂದು ಕವನ ಸಂಕಲನ ಒಲವ ಕಂದೀಲು ಬಿಡುಗಡೆಗೊಂಡಿದೆ. ಬಣ್ಣದ ಚಿಟ್ಟೆ ಮಕ್ಕಳ ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಂಡಿದೆ.
ಪ್ರಶಸ್ತಿಗಳ ಗರಿಮೆ
ಕೊಪ್ಪಳ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರಿಂದ ಇವರ ಶಿಕ್ಷಣ ಕಳಕಳಿಗೆ ಮತ್ತು ಇವರ ಸಾಮಾಜಿಕ ಕಾಳಜಿಗೆ ಕೊಪ್ಪಳದ ಸಾರ್ವಜನಿಕ ಶಿಕ್ಷಣ ಸರ್ವಶಿಕ್ಷಣ ಅಭಿನಯಾನದಡಿ ೨೦೦೮-೦೯ ನೇ ಸಾಲಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ, ಹಳೇಯ ವಿದ್ಯಾರ್ಥಿಗಳಿಂದ ಪ್ರೇರಣಾ ಶಿಕ್ಷಕ ರತ್ನ ಪ್ರಶಸ್ತಿ, ಜ್ಞಾನ ಜ್ಯೋತಿ ಶಿಕ್ಷಕ ಪ್ರಶಸ್ತಿ, ೨೦೧೯ ರಲ್ಲಿ ಮಧುಗಿರಿ ತಾಲ್ಲೂಕು ಆಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ, ೨೦೨೦ ರಲ್ಲಿ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಮಧುಗಿರಿ ವತಿಯಿಂದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಮಾದರಿಯಾಗಿದ್ದಾರೆ.
ವಿಕಲಚೇತನರಿಗೆ ಅಂಗವಿಕಲತೆ ಅಡ್ಡಿಯಾಗುತ್ತದೆ ಅಂದುಕೊಂಡರೆ ಸಾಧನೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿಗೆ ಬುದ್ದಿವಂತಿಕೆ ಹಾಗೂ ಆತ್ಮಬಲ ಮುಖ್ಯ. ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುತ್ತಾರೆ ಸಿ.ಇ. ಶಾಂತಕುಮಾರ್.
ಬಹುಮುಖ ಪ್ರತಿಭೆ ಶಿಕ್ಷಕ ಸಿ.ಇ. ಶಾಂತಕುಮಾರ್ ತಮ್ಮ ವಿನೂತನ ಪ್ರಯೋಗಗಳ ಮೂಲಕ ಮಾದರಿಯಾಗಿದ್ದಾರೆ. ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದು, ಇವರ ಕವನ ಸಂಕಲನಗಳು ಮನಮುಟ್ಟುವಂತಿವೆ. ಇವರು ಶಿಕ್ಷಣ ಇಲಾಖೆಯ ಹೆಮ್ಮೆ ಎಂದು ಮಧುಗಿರಿ ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.