ಮಕ್ಕಳ ಪ್ರಾಥಮಿಕ ಪೂರ್ವ ಶಿಕ್ಷಣಕ್ಕೆ ಭದ್ರ ಬುನಾದಿಯೇ ಅಂಗನವಾಡಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ. 30 :-ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವುದರ ಜತೆಗೆ ಪ್ರಾಥಮಿಕ ಪೂರ್ವ ಶಿಕ್ಷಣ, ಆಟದಿಂದ ಪಾಠದ ಕಲಿಕೆಗೆ ಭದ್ರ ಬುನಾದಿಯಾಗಿರುವುದೇ  ಅಂಗನವಾಡಿ ಕೇಂದ್ರಗಳು  ಎಂದು ಪ್ರಗತಿಪರ ರೈತ ಎಚ್.ಸಿ.ಶಿವಶಂಕರಮೂರ್ತಿ ತಿಳಿಸಿದರು.
ಅವರು ತಾಲೂಕಿನ ಹುಡೇಂ ಗ್ರಾಪಂ ವ್ಯಾಪ್ತಿಯ ಹೊಸೂರಿನಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ ತಾಲೂಕಿನ ಗಡಿಗ್ರಾಮವಾದ ಹೊಸೂರಿನಲ್ಲಿ   ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರ ಸಹಕಾರಿಯಾಗಿದ್ದು,  ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಅನುದಾನದಲ್ಲಿ  ಕಟ್ಟಡ ನಿರ್ಮಾಣವಾಗಿರುವುದು ಉತ್ತಮ ಕೆಲಸವಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಅನುಪಮಾ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾರ್ಗಸೂಚಿಯಂತೆ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿತರಿಸುವ ಪೌಷ್ಟಿಕ ಆಹಾರವನ್ನು ಸಕಾಲದಲ್ಲಿ ನೀಡಬೇಕು. ಮಕ್ಕಳ ಕಲಿಕೆಗೆ ಒತ್ತು ನೀಡುವುದಲ್ಲದೆ, ಅವರ ಆರೋಗ್ಯದ ಬಗ್ಗೆಯೂ ನಿಗಾವಹಿಸಿ ಆರೋಗ್ಯವಂತ ಗ್ರಾಮವಾಗಿಸಲು ಮುಂದಾಗಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕುರುಬರ ಶರಣಪ್ಪ, ಎಚ್.ವಿ.ವಿರೂಪಾಕ್ಷಪ್ಪ, ಶಿವಣ್ಣ, ವೆಂಕಟೇಶ್, ಎಚ್.ಕೆ.ವೀರಣ್ಣ, ಎಚ್.ಕೆ.ರಾಜಣ್ಣ, ಅಂಗನವಾಡಿ ಕಾರ್ಯಕರ್ತೆ ಬಿ.ಎನ್.ಪಾರ್ವತಮ್ಮ, ಸಹಾಯಕಿ ರೂಪಾ ಇತರರಿದ್ದರು.