
ಚನ್ನಪಟ್ಟಣ,ಮಾ.೩-ಪ್ರತಿಯೊಬ್ಬ ಮಕ್ಕಳು ತಮ್ಮ ಜ್ಞಾನವನ್ನು ವೃದ್ದಿಸಿಕೊಂಡು ಭವ್ಯ ಭಾರತಕ್ಕೆ ತಮ್ಮದೇ ಆದ ಕೊಡುಗೆ ನೀಡುವತ್ತಾ ತಮ್ಮ ಚಿಂತನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ ಹೇಳಿದರು.
ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಎಲ್.ಎಸ್.ಐ.ವಿಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಗಳನ್ನು ಹೊರತೆಗೆದು ವೇದಿಕೆ ಕಲ್ಪಿಸಿದಾಗ ಮಾತ್ರ ಮಕ್ಕಳಲ್ಲಿರುವ ಪ್ರತಿಭೆಗಳು ಮೇಳೈಸಲು ಸಾಧ್ಯವಾಗುತ್ತದೆ. ಅದರಲ್ಲೂ ವಿಜ್ಞಾನ ಕ್ಷೇತ್ರದ ಬಗ್ಗೆ ಕೆಲ ಮಕ್ಕಳಲ್ಲಿ ಬಹಳ ಶ್ರದ್ದೆ ಇರುವುದರಿಂದ, ಮಕ್ಕಳ ಜ್ಞಾನ ವಿಕಾಸಕ್ಕೆ ಸಹಕಾರಿಯಾಗುವ ಈ ರೀತಿಯ ವಿಜ್ಞಾನ ವಸ್ತುಪ್ರದರ್ಶನಗಳ ಅತ್ಯಶ್ಯಕವಾಗಿದೆ ಎಂದರು.
ವಿಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ಪೂರಕವಾದ ಅವಿಷ್ಕರಗಳನ್ನು ಕಂಡುಹಿಡಿಯುವ ಮುಖಾಂತರ ಭಾರತಕ್ಕೆ ಕೊಡುಗೆ ನೀಡಬೇಕು, ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಕ್ಕಳು ಹಲವಾರು ರೀತಿಯಲ್ಲಿ ತಮ್ಮ ಬುದ್ದಿ ಕೌಶಲ್ಯತೆಯನ್ನು ಮೆರೆಯುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ತಾವು ಒಂದು ಖಾಸಗಿ ಶಿಕ್ಷಣ ಸಂಸ್ಥೆಯನ್ನು ಹೊಂದಿ, ಗ್ರಾಮಾಂತರ ಬಡ ಪ್ರತಿಭಾವಂತ ಮಕ್ಕಳಿಗೆ ತಮ್ಮ ಬಾಲು ಶಿಕ್ಷಣ ಸಂಸ್ಥೆಯಲ್ಲಿ ಅವಕಾಶ ನೀಡುವುದರ ಮುಖಾಂತರ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಲು ಆಸ್ಪತ್ರೆಯ ವೈದ್ಯೆ ಡಾ. ಕೆ.ಪಿ.ಶೈಲಜಾ ಮಾತನಾಡಿ,ಭಾರತ ದೇಶದಲ್ಲಿ ಅದರಲ್ಲೂ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಮಹಾನ್ ವಿಜ್ಞಾನಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಲ್ಲದೆ ಪ್ರಸಕ್ತವಾಗಿ ಯುವ ವಿಜ್ಞಾನಿಗಳು ಹಲವಾರು ರೀತಿಯ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಭಾವಿಪ ಅಧ್ಯಕ್ಷ ವಂಸತ ಕುಮಾರ್ ಮಾತನಾಡಿದರು.